ಮಡಿಕೇರಿ, ಜ. 13: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಸಹಯೋಗದೊಂದಿಗೆ ಕೊಡಗು ಪುನಶ್ಚೇತನಕ್ಕಾಗಿ ಏರ್ಪಡಿಸಲಾಗಿರುವ ಕೊಡಗು ಪ್ರವಾಸಿ ಉತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.

ತಾ. 12ರಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಿಕ್ಷಕರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಅಂಬಳೆ ಹೇಮಂತ್ ಹೇರಂಭ ಸಹೋದರರಿಂದ ಕೊಳಲುವಾದನ ಮನಸಿಗೆ ಮುದ ನೀಡಿತು. ಸರಿಗಮಪ ಖ್ಯಾತಿಯ ಗಾಯಕರುಗಳಾದ ಚನ್ನಪ್ಪ, ಶ್ರೀಹರ್ಷ, ಇಂಪನ, ಐಶ್ವರ್ಯ, ಸುಹಾನ ಸಯ್ಯದ್ ಇವರುಗಳು ತಮ್ಮ ಗಾಯನದ ಮೂಲಕ ಮನರಂಜಿಸಿದರಾದರೂ ಹೊಸ ಗೀತೆಗಳನ್ನೂ ಸಭಿಕರು ಬಯಸಿದರು. ಸರಿಗಮಪದ ಇತ್ತೀಚಿನ ಚಾಂಪಿಯನ್ ಸುನಿಲ್ ಹೆಸರು ಆಮಂತ್ರಣ ಪತ್ರದಲ್ಲಿತ್ತಾದರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇನ್ನುಳಿದಂತೆ ಧಾರಾವಾಹಿ ಕಲಾವಿದರ ನೃತ್ಯ ವೈಭವದಲ್ಲಿ ಕುಲವಧು ಧಾರಾವಾಹಿಯ ದೀಪಿಕಾ, ಪುಟ್ಟಗೌರಿ ಮದುವೆಯ ನಮ್ರತಾ, ಚಿತ್ರನಟಿ, ಸಿಂಧು ಲೋಕನಾಥ್ ಹೊರತು ಪಡಿಸಿ ಆಮಂತ್ರಣ ಪತ್ರದಲ್ಲಿದ್ದ ಕೆಲವರು ಕಾರ್ಯಕ್ರಮದಲ್ಲಿ ಕಂಡು ಬರಲಿಲ್ಲ.

ನಿರೀಕ್ಷೆಗೂ ಮೀರಿದ ಕಲಾಭಿಮಾನಿಗಳು ಗಾಂಧಿಮೈದಾನದಲ್ಲಿ ಕಿಕ್ಕಿರಿದು ಸೇರಿ 2ನೇ ದಿನದ ಕೊಡಗು ಪ್ರವಾಸಿ ಉತ್ಸವಕ್ಕೆ ಕಳೆ ತುಂಬಿದರು. ಆಹಾರ ಉತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಭರ್ಜರಿ ವ್ಯಾಪಾರ ಸಿಕ್ಕಿತು. ಸಂಗೀತ ರಸಮಂಜರಿಯಲ್ಲಿ ನೃತ್ಯ - ಹಾಡುಗಳಿಗೆ ತಾಳ ಹಾಕಿದ ಜನತೆ ಕೊಡಗಿನವರ ಮನೋಸ್ಥೈರ್ಯ ತುಂಬುವಲ್ಲಿ ಸಹಕಾರಿಯಾದರು.