ಗೋಣಿಕೊಪ್ಪ ವರದಿ, ಜ. 13: ತಾ. 14 ರಂದು (ಇಂದು) ಗೋಚರಿಸಲಿರುವ ಸ್ವಾಮಿ ಅಯ್ಯಪ್ಪ ಜ್ಯೋತಿಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಲು ಎಲ್‍ಇಡಿ ಪರದೆ ಮೂಲಕ ಅವಕಾಶ ಮಾಡಿಕೊಡಲಾಗುವದು ಎಂದು ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್ ತಿಳಿಸಿದ್ದಾರೆ.
ಅಂದು ಸಂಜೆ 5 ಗಂಟೆಯಿಂದ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಜ್ಯೋತಿ ಬೆಳಗುವ ಸಮಯದವರೆಗೆ ದೊಡ್ಡ ಪರದೆಯಲ್ಲಿ ನೇರ ಪ್ರಸಾರದ ಮೂಲಕ ಬಿತ್ತರಿಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಲಯಾಳಿ ಸಮಾಜದ ವತಿಯಿಂದ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿದ್ದು, ಎಲ್ಲಾ ಸ್ವಾಮಿ ಅಯ್ಯಪ್ಪ ಭಕ್ತಾದಿಗಳು ಪಾಲ್ಗೊಳ್ಳಬಹುದಾಗಿದೆ ಎಂದರು. ಸಂಜೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಜ್ಯೋತಿ ದರ್ಶನದ ವರೆಗೂ ಅಯ್ಯಪ್ಪ ಸ್ವಾಮಿಯ ನಾಮಜಪ, ಸ್ತುತಿ, ಚರಣ, ಭಜನೆ ನಡೆಯಲಿದೆ. ಜ್ಯೋತಿಯ ನಂತರ ಶಬರಿಮಲೆ ಪಮದಕಳಂ ಅರಮನೆಯಿಂದ ತಂದಿರುವ ಅರವಡ ಪಾಯಸವನ್ನು ಪ್ರಸಾದವಾಗಿ ನೀಡಲಾಗುವದು. ಇದರೊಂದಿಗೆ ಲಘು ಉಪಹಾರ, ಪ್ರಸಾದವನ್ನು ನೀಡಲಾಗುವದು. ರಾತ್ರಿ 6.40 ಕ್ಕೆ ಜ್ಯೋತಿ ದರ್ಶನವಾಗುವ ಸಮಯದ ಬಗ್ಗೆ ಮಾಹಿತಿ ಇದೆ ಎಂದರು.
ಗೋಷ್ಠಿಯಲ್ಲಿ ಸಮಾಜದ ಗೌರವ ಅಧ್ಯಕ್ಷ ಬಾಸ್ಕರ್, ಖಜಾಂಚಿ ಸುಬ್ರಮಣಿ, ಸದಸ್ಯ ರಾಜಶೇಖರ್ ಉಪಸ್ಥಿತರಿದ್ದರು.