ವೀರಾಜಪೇಟೆ ಜ:10 ಕೊಡಗು ಕೇರಳ ಗಡಿ ಪ್ರದೇಶ ವಾದ ಮಾಕುಟ್ಟದಲ್ಲಿ ಈಚೆಗೆ ಮಳೆ ಹಾನಿಯಿಂದ ರಾಜ್ಯ ಹೆದ್ದಾರಿ ರಸ್ತೆಯ ಬದಿ ಸೇತುವೆಗಳು ದುರಸ್ತಿಗೊಂಡಿದ್ದು, ಯಾವದೇ ವಾಹನ ಸಂಚಾರಕ್ಕೆ ಅನಾನೂಕೂಲವಾಗಿದ್ದು, ಕೆಲವೇ ಸಮಯದಲ್ಲಿ ತಾತ್ಕಾಲಿಕವಾಗಿ ದುರಸ್ತಿಪಡಿಸಲಾಗಿತ್ತು. ಈಗ ಆಧುನಿಕ ತಂತ್ರಜ್ಞಾನವನ್ನೊಳಗೊಂಡು ಆಧುನಿಕ ಸಲಕರಣೆಗಳನ್ನು ಬಳಸಿ ವೈಜ್ಞಾನಿಕವಾಗಿ ರಸ್ತೆ ಬದಿ ಹಾಗೂ ಸೇತುವೆಯ ದುರಸ್ತಿ ಕಾಮಗಾರಿ ಶೇಕಡ 60ರಷ್ಟು ಮುಗಿದಿದ್ದು ಮುಂದಿನ ಫೆಬ್ರವರಿ 15ರೊಳಗೆ ರಸ್ತೆ ಬದಿ, ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಎಲ್ಲ ವಾಹನಗಳ ಸಂಚಾರಕ್ಕೆ ಕೊಡಗು ಕೇರಳ ಗಡಿ ಭಾಗದ ಹೆದ್ದಾರಿ ರಸ್ತೆ ಮುಕ್ತಗೊಳ್ಳಲಿದೆ.ವೀರಾಜಪೇಟೆ ತಾಲೂಕಿಗೆ ರಸ್ತೆ ಬದಿ ಕುಸಿತದ ರಕ್ಷಣೆ ಹಾಗೂ ಸೇತುವೆ ದುರಸ್ತಿ, ವಿಸ್ತರಣೆ ಅಭಿವೃದ್ಧಿಗೆ ಮಾಕುಟ್ಟ ರಾಜ್ಯ ಹೆದ್ದಾರಿ ರಸ್ತೆ ಬದಿ ಸೇತುವೆ ಸೇರಿದಂತೆ ಸರಕಾರ ರೂ930ಲಕ್ಷಗಳಷ್ಟು ಮಂಜೂರು ಮಾಡಿದೆ.ಈ ಪೈಕಿ ರೂ 4.70ಲಕ್ಷವನ್ನು ಅಂತರರಾಜ್ಯ ಹೆದ್ದಾರಿ ರಸ್ತೆ ಬದಿ ಕುಸಿತದ ರಕ್ಷಣೆ ಸೇತುವೆಯನ್ನು ಆಧುನಿಕವಾಗಿ ದುರಸ್ತಿ ಪಡಿಸಲು ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿದೆ.
ಈಚೆಗೆ ಮಂಗಳೂರು ಸುರತ್ಕಲ್‍ನ ಎನ್.ಐ.ಟಿಯು. ತಾಂತ್ರಿಕ ಕಾಲೇಜಿನ ತಜÐರು ಭಾರೀ ಮಳೆಯಿಂದ ಹಾನಿಗೊಳಗಾದ ಮಾಕುಟ್ಟ ರಸ್ತೆಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ ನಂತರ ಸೇತುವೆ ಹಾಗೂ ಕುಸಿದಿರುವ ರಸ್ತೆ ಬದಿಯನ್ನು ಯಾವ ರೀತಿ ದುರಸ್ತಿ ಪಡಿಸಬೇಕೆಂದೂ ಸಲಹೆ ನೀಡಿದ್ದಾರೆ. ಅದರಂತೆ ಉತ್ತರ ಭಾರತದಿಂದ ಗಡಿ ರಸ್ತೆ ರಕ್ಷಣಾ ನಿಗಮದ ತಜ್ಞರು ಭೇಟಿ ನೀಡಿ ಸೇತುವೆ ದುರಸ್ತಿಯ ಕುರಿತು ಸಲಹೆಗಳನ್ನು ನೀಡಿದ್ದು ಉಪಯುಕ್ತ ಸಲಹೆಗಳನ್ನು ಬಳಸಿ ರಸ್ತೆ ಬದಿಯ ರಕ್ಷಣೆ ಹಾಗೂ ಸೇತುವೆಯ ದುರಸ್ತಿ ಕಾರ್ಯದ ಕಾಮಗಾರಿ ಮುಂದುವರೆದಿದೆ.
(ಮೊದಲ ಪುಟದಿಂದ) ವೀರಾಜಪೇಟೆ ಬಳಿಯ ಪೆರುಂಬಾಡಿ ಚೆಕ್‍ಪೋಸ್ಟ್‍ನಿಂದ ಮಾಕುಟ್ಟದ ಕೂಟುಪೊಳೆ ಸೇತುವೆವರೆಗೆ ಇಲಾಖೆಯಿಂದ ದುರಸ್ತಿ ಕಾರ್ಯ ನಡೆದಿದೆ. ಮಾಕುಟ್ಟಕ್ಕೆ ತೆರಳುವ ವಾಟೆಕೊಲ್ಲಿ, ಮೆಮನಕೊಲ್ಲಿ, ಹನುಮಾನ್‍ಪಾಲ, ಮಾಕುಟ್ಟದ ಅಂಬು ಹೊಟೇಲ್ ಬಳಿಯಿರುವ ಬೃಹತ್ ಸೇತುವೆ ಹಾಗೂ ರಸ್ತೆ ಬದಿಯ ಕುಸಿತವನ್ನು ದುರಸ್ತಿ ಪಡಿಸಲಾಗುವದು
ರಸ್ತೆ ಕುಸಿತ ಹಾಗೂ ಸೇತುವೆ ಕೆಳಗಿನ ಮರಳು ಚೀಲವನ್ನು ರಕ್ಷಿಸಲು ಗುಜರಾತ್ ರಾಜ್ಯದ ಆಧುನಿಕ ತಂತ್ರಗಾರಿಕೆಯಾದ ಅಲ್ಯೂಮಿನಿಯಂ ಕೋಟೆಡ್ ಬಾಕ್ಸ್‍ನ್ನು (ಗೇಬಿಯನ್ ಬಾಕ್ಸ್) ಬಳಸಲಾಗಿದೆ. ಮೆಸ್ ಬಾಕ್ಸ್‍ನೊಳಗೆ ಸುರಕ್ಷಿತವಾಗಿ ಅಳತೆ ಪ್ರಕಾರ ಕಲ್ಲನ್ನು ಇಡಲಾಗುವದು. ಇದರ ಮುಂದೆ ಪ್ರತ್ಯೇಕವಾಗಿ ಜಿಯೋ ಫ್ಯಾಬ್ರಿಕ್ ಕಾಟನ್ ಬಟ್ಟೆಯನ್ನು ಬಳಸಲಾಗಿದೆ. ಇದರಿಂದ ಸೇತುವೆ ಕೆಳಗೆ ಶೇಖರಿಸುವ ನೀರು ಸರಾಗವಾಗಿ ಬಾಕ್ಸ್ ಮೆಸ್ ಹಾಗೂ ಕಾಟನ್ ಬಟ್ಟೆಯನ್ನು ಹಾಯ್ದು ಯಾವದೇ ಆತಂಕವಿಲ್ಲದೆ ನೀರು ತೋಡಿಗೆ ಹರಿಯಲಿದೆ. ಇದರಿಂದ ಸೇತುವೆಯ ರಕ್ಷಣೆಯೊಂದಿಗೆ ಮರಳು ಚೀಲವು ಜಾರದೇ ಸುರಕ್ಷಿತವಾಗಿದ್ದು ಸೇತುವೆಯು ಭದ್ರತೆಯನ್ನು ಹೊಂದಿರುತ್ತದೆ. ತಂತ್ರಜ್ಞರ ಸಲಹೆ ಮೇರೆಗೆ ಇದಕ್ಕಾಗಿ ಗುಜರಾತ್ ರಾಜ್ಯದಿಂದ 4ಮೀಟರ್ ಉದ್ದದ, ಒಂದು ಮೀಟರ್ ಎತ್ತರದ, ಒಂದು ಮೀಟರ್ ಅಗಲದ ಗೇಬಿಯನ್ ಬಾಕ್ಸ್ ಮೆಸ್‍ನ್ನು ಸುಮಾರು 80 ಸಂಖ್ಯೆಯಲ್ಲಿ ತರಲಾಗಿದೆ. ಇದೇರೀತಿಯಲ್ಲಿ ಒಂದೂವರೆ ಮೀಟರ್ ಅಗಲದಂತೆ ಒಟ್ಟು ಪ್ರತಿ 200ಮೀಟರಿನ ಹದಿನೆಂಟು ಬಂಡಲ್ ಸೇರಿ ಒಟ್ಟು 3600 ಮೀಟರ್ ಜಿಯೋ ಫ್ಯಾಬ್ರಿಕ್ಸ್ ಕಾಟನ್ ರೋಲ್‍ನ್ನು ತರಿಸಿ ಕಾಮಗಾರಿಗೆ ಬಳಸಲಾಗಿದೆ. ಕೇರಳದ ಕಾಮಗಾರಿ ತಾಂತ್ರಿಕ ತಜ್ಞ ಕೆಲಸಗಾರರು ಗೇಬಿಯನ್ ಬಾಕ್ಸ್ ಮೆಸ್ ಹಾಗೂ ಜಿಯೋ ಬಾಕ್ಸ್‍ನ್ನು ಕಾಮಗಾರಿಯಲ್ಲಿ ಬಳಸಿರುವದರಿಂದ ಸೇತುವೆಯು ಮುಂದಕ್ಕೆ ಸುರಕ್ಷಿತವಾಗಿರಲು ಸಾಧ್ಯವಿದೆ ಎಂದು ವೀರಾಜಪೇಟೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಸಹಾಯಕ ಅಭಿಯಂತರ ಎಂ.ಎಸ್.ಸುರೇಶ್ ತಿಳಿಸಿದ್ದಾರೆ.
ಇಲಾಖೆ ಅಧಿಕಾರಿ ಸುರೇಶ್ ಅವರೊಂದಿಗೆ ವೀರಾಜಪೇಟೆ ಕಚೇರಿಯ ಸಹಾಯಕ ಅಭಿಯಂತರ ಯತೀಶ್ ಕಾಮಗಾರಿಯ ಉಸ್ತುವಾರಿಯಲ್ಲಿದ್ದು ಪ್ರತಿದಿನ 40ರಿಂದ 50ಮಂದಿ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದಾರೆ.
-ಡಿ.ಎಂ.ಆರ್