ತಾ. 16 ರಂದು ಮಹತ್ವದ ಕಾರ್ಯಕ್ರಮ ನಿಗದಿ
ಮಡಿಕೇರಿ, ಜ. 11: ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಈಗಾಗಲೇ ಕೈಗೊಂಡಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಪ್ರಶ್ನೆ ಪರಿಹಾರ ಕಾರ್ಯದ ಪ್ರಯುಕ್ತ ತಾ. 16 ರಂದು ಶ್ರೀ ತಲಕಾವೇರಿ ದೇವಾಲಯದಲ್ಲಿ ವಿಮರ್ಶೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಕ್ಷೇತ್ರಗಳ ಆಸಕ್ತ ಭಕ್ತರು, ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ.
ಈ ಕುರಿತು ಸಮಿತಿಯ ಪ್ರಕಟಣೆ ಮಾಹಿತಿ ನೀಡಿದೆ. ಭಾಗಮಂಡಲ - ಶ್ರೀ ತಲಕಾವೇರಿ ದೇವಸ್ಥಾನದಲ್ಲಿ ಅಷ್ಟಬಂದ ಬ್ರಹ್ಮ ಕಲಶ ಕಾರ್ಯಕ್ರಮವನ್ನು ನಡೆಸುವದಕ್ಕೆ ಪೂರಕವಾಗಿ ಈ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿಯು ಮುಕ್ತಾಯದ ಹಂತದಲ್ಲಿದ್ದುದರಿಂದ ಪೂರ್ಣ ಪ್ರಮಾಣದ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಲು ಸಾಧ್ಯವಾಗದ ಕಾರಣದಿಂದಾಗಿ ತಾ. 15.12.2014 ರಂದು ತಾಂಬೂಲ ಪ್ರಶ್ನೆಯನ್ನು ಏರ್ಪಡಿಸಲಾಗಿರುತ್ತದೆ.
ಶ್ರೀ ತಲಕಾವೇರಿ ದೇವಸ್ಥಾನದಲ್ಲಿ 2006ನೇ ಸಾಲಿನಲ್ಲಿ ಅಷ್ಟಬಂಧ ಬ್ರಹ್ಮ ಕಲಶ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಚಾಲ್ತಿಯಲ್ಲಿರುವ ಸಂಪ್ರದಾಯದಂತೆ 12 ವರ್ಷಗಳಿಗೊಮ್ಮೆ ಅಷ್ಟಬಂಧ ಬ್ರಹ್ಮ ಕಲಶ ನಡೆಸುವ ಉದ್ದೇಶದಿಂದ ಕ್ಷೇತ್ರದ ತಂತ್ರಿಯವರ ಸಲಹೆಯ ಮೇರೆಗೆ 2018 ರ ಮೇ ತಿಂಗಳಿನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ವ್ಯವಸ್ಥಾಪನಾ ಸಮಿತಿಯ ವತಿಯಿಂದ, ಶ್ರೀ ತಲಕಾವೇರಿ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ಕೇರಳದ ಪಯ್ಯನೂರಿನ ಶ್ರೀ ನಾರಾಯಣ ಪೊದುವಾಳ್ ಎಂಬ ಜ್ಯೋತಿಷಿಯವರಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮವನ್ನು ಕ್ಷೇತ್ರದ ತಂತ್ರಿಯವರ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದು, ಸದರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಸಕ್ತ ಭಕ್ತರು, ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ.
ವ್ಯವಸ್ಥಾಪನಾ ಸಮಿತಿಯ ಸಭೆಗಳಲ್ಲಿ ಕೈಗೊಂಡ ತೀರ್ಮಾನದಂತೆ ಈಗಾಗಲೇ ಅಷ್ಟಮಂಗಲ ಪರಿಹಾರ ಕಾರ್ಯಗಳು ಮುಕ್ತಾಯಗೊಂಡಿದ್ದು, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಪರಿಹಾರ ಕಾರ್ಯಗಳನ್ನು ಪೂರ್ವ ನಿಗದಿತ ಕಾರ್ಯದಂತೆ ವ್ಯವಸ್ಥಾಪನಾ ಸಮಿತಿಯ ವತಿಯಿಂದ ತಾ. 9.12.2018 ರಿಂದ 12.12.2018 ರವರೆಗೆ ಶ್ರೀ ತಲಕಾವೇರಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಯವರಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಪರಿಹಾರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸಲಾಗಿರುತ್ತದೆ ಹಾಗೂ ಕ್ಷೇತ್ರದ ತಂತ್ರಿಯವರ ಸಲಹೆಯ ಮೇರೆಗೆ ಇದೀಗ ತಾ. 16 ರಂದು ಶ್ರೀ ತಲಕಾವೇರಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಯವರ ಉಪಸ್ಥಿತಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಪರಿಹಾರಗಳಿಗೆ ಸಂಬಂಧಿಸಿದಂತೆ ನಡೆಸಲಾದ ಧಾರ್ಮಿಕ ಕಾರ್ಯಗಳ ಬಗ್ಗೆ ವಿಮರ್ಶೆ ಕಾರ್ಯಕ್ರಮವನ್ನು ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ಜ್ಯೋತಿಷಿ ಯವರಿಂದ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಆಸಕ್ತ ಭಕ್ತರು, ಪ್ರಮುಖರು ಭಾಗವಹಿಸುತ್ತಿದ್ದು, ನಾಡಿನ ಸಮಸ್ತ ಜನರ ಕ್ಷೇಮಾಭಿವೃದ್ಧಿ ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮಕ್ಕೆ ತಾವು ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಲು ಸಮಿತಿ ಕೋರಿದೆ.