ಸೋಮವಾರಪೇಟೆ, ಜ. 11: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಿ ಕೊಪ್ಪದ ಗ್ರಾಮ ಸ್ಥರಿಗೆ ಕುಡಿಯುವ ನೀರನ್ನು ಒದಗಿಸುವ ಕೊಳವೆ ಬಾವಿಯೊಳಗೆ ಹಾವು ಸತ್ತಿದ್ದು, ಇದೇ ಬಾವಿಯಿಂದ ಮಲೀನ ನೀರು ಸರಬರಾಜಾಗಿದೆ.ನೀರನ್ನು ಒದಗಿಸುವ ಬೋರ್ವೆಲ್ಗೆ ಪೈಪ್ಗಳನ್ನು ಅಳವಡಿಸಲಾಗಿದ್ದು, ತುದಿ ಭಾಗದಲ್ಲಿ ಮುಚ್ಚಳ ಅಳವಡಿಸದೇ ಇರುವದರಿಂದ ಕೆಲ ದಿನಗಳ ಹಿಂದೆ ಹಾವೊಂದು ಕೊಳವೆ ಬಾವಿಯೊಳಗೆ ಬಿದ್ದಿದೆ. ನಂತರ ಮೇಲೆ ಬರಲಾಗದೇ ಅಲ್ಲೇ ಸಾವನ್ನಪ್ಪಿದೆ. ಇದೀಗ ಕೊಳೆತಿರುವ ಹಾವಿನ ತ್ಯಾಜ್ಯಗಳು ಪಂಪ್ನಲ್ಲಿ ಮೇಲೆ ಬರುತ್ತಿದ್ದು, ಪೈಪ್ ಮೂಲಕ ಗ್ರಾಮದ ಮನೆಗಳಿಗೆ ಸರಬರಾಜಾಗಿದೆ.ಬಿಂದಿಗೆ, ಹಂಡೆಗಳಲ್ಲಿ ಶೇಖರಿಸಲ್ಪಟ್ಟ ನೀರಿನಲ್ಲಿ ಹಾವಿನ ಅವಶೇಷಗಳು (ಮೊದಲ ಪುಟದಿಂದ) ಕಂಡುಬಂದಿದ್ದು, ಗಬ್ಬು ವಾಸನೆ ಬೀರುತ್ತಿದ್ದುದರಿಂದ ಪಂಚಾಯಿತಿಯ ಗಮನಕ್ಕೆ ತರಲಾಗಿದೆ. ನಂತರ ವಾಟರ್ಮೆನ್ ಸ್ಥಳಕ್ಕಾಗಮಿಸಿ ನೀರನ್ನು ಸಂಗ್ರಹಿಸಿದ್ದು, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವದು ಎಂದು ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಇದೇ ನೀರನ್ನು ನಾವುಗಳು ಬಳಸುತ್ತಿದ್ದು, ನಿನ್ನೆ ದಿನ ಮಲೀನಗೊಂಡಿರುವ ನೀರು ಮನೆಗೆ ಬಂದಿದೆ. ನೀರಿನಲ್ಲಿ ಕೊಳೆತ ಹಾವಿನ ಅವಶೇಷಗಳು ಕಂಡುಬಂದಿದ್ದು, ಬೋರ್ವೆಲ್ನ ಮೇಲ್ಭಾಗದಲ್ಲಿ ಮುಚ್ಚಳ ಹಾಕದೇ ನಿರ್ಲಕ್ಷ್ಯ ವಹಿಸಿರುವದರಿಂದ ಇಂತಹ ಅಚಾತುರ್ಯ ಸಂಭವಿಸಿದೆ. ತಕ್ಷಣ ಬೋರ್ವೆಲ್ನ್ನು ಶುದ್ಧೀಕರಿಸಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರಾದ ದಾಮೋಧರ್, ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೊಳವೆ ಬಾವಿಗಳಿಗೆ ಮುಚ್ಚಳ ಅಳವಡಿಸಬೇಕೆಂದು ಅಭಿಪ್ರಾಯಿಸಿದ್ದಾರೆ.