ಗೋಣಿಕೊಪ್ಪಲು, ಜ. 11: sಸಹಕಾರ ಸಂಘಗಳ ಬೈಲಾ ನಿಯಮಾನುಸಾರ ಮತದಾನದ ಹಕ್ಕು ಕಳೆದುಕೊಂಡಿರುವ ಸಂಘದ ಸದಸ್ಯರು ಸಲ್ಲಿಸಿದ ರಿಟ್ ಅರ್ಜಿಗೆ ಮನ್ನಣೆ ನೀಡಿರುವ ರಾಜ್ಯ ಉಚ್ಚ ನ್ಯಾಯಾಲಯವು ಸಂಘದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿನ ತಾ. 12ರಂದು ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆಯುವ ಚುನಾವಣೆ ಮುಂದೂಡಬೇಕು. 1400ಕ್ಕೂ ಅಧಿಕ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಕು. ಚುನಾವಣೆಯಲ್ಲಿ ಸಂಘದ ಬೈಲಾದ ನಿಯಮದಂತೆ ಕೇವಲ 506 ಮಂದಿಗೆ ಮತದಾನ ಮಾಡುವ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ತಿಳಿಸಿದ್ದಾರೆ.

ಸಂಬಂಧಿಸಿದ ಚುನಾವಣಾಧಿಕಾರಿಗಳು ಚುನಾವಣೆಯನ್ನು ಮುಂದೂಡಬೇಕು ಸದಸ್ಯರೆಲ್ಲರಿಗೂ ಮತದಾನದ ಹಕ್ಕು ನೀಡಬೇಕು. ತಪ್ಪಿದಲ್ಲಿ ರೈತ ಸಂಘದಿಂದ ಪ್ರತಿಭಟನೆ ಹಾಗೂ ನ್ಯಾಯಾಂಗ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠವು ಮತದಾನದ ಹಕ್ಕು ಕಸಿದುಕೊಳ್ಳುವ ಅಧಿಕಾರ ಸಹಕಾರ ಸಂಘಗಳಿಗೆ ಇರುವದಿಲ್ಲ ಎಂದು ಉಲ್ಲೇಖಿಸಿ ಸಂಘದ ತೀರ್ಮಾನಕ್ಕೆ ತಾ. 10ರಂದು ತಡೆಯಾಜ್ಞೆ ನೀಡಿತ್ತು.

ಗೋಣಿಕೊಪ್ಪ ವರದಿ : ಕಾನೂರು ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಗೆ ತಾ. 12 ರಂದು ಜರಗುವ ಚುನಾವಣೆ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

ಎಲ್ಲಾ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಮಾಹಿತಿ ನೀಡಿ, ಈಗ ಎಲ್ಲಾ ಸದಸ್ಯರಿಗೆ ಮತದಾನದ ಹಕ್ಕು ನೀಡುತ್ತಿರುವದರಿಂದ ಸದಸ್ಯರಿಗೆ ಮಾಹಿತಿ ಇಲ್ಲದಂತಾಗಿದೆ. ಇದರಿಂದಾಗಿ ಚುನಾವಣೆ ಕ್ರಮಬದ್ಧವಾಗಿ ನಡೆಯಲು ಸಾಧ್ಯವಿಲ್ಲ. ಮಾಹಿತಿ ಕೊರತೆಯಿಂದಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಬೋಪಣ್ಣ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಒಟ್ಟು 1400 ಸದಸ್ಯರಲ್ಲಿ ಮತದಾನದ ಹಕ್ಕು 407 ಸದಸ್ಯರಿಗೆ ಮಾತ್ರ ಇದೆ. ಉಳಿದ ಸದಸ್ಯರು ಸಂಘದಲ್ಲಿ ಸಂಘದ ಬೈಲಾ ಪ್ರಕಾರ ಆರ್ಥಿಕ ವ್ಯವಹಾರ ನಡೆಸದ ಕಾರಣ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಹೈಕೋರ್ಟ್ ಎಲ್ಲರಿಗೂ ಮತದಾನದ ಹಕ್ಕಿದೆ ಎಂದು ತೀರ್ಪು ನೀಡಿರುವದರಿಂದ ಮತದಾನ ಮಾಡಲು ಸದಸ್ಯರಿಗೆ ಮಾಹಿತಿ ಕೊರತೆ ಇದೆ. ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಚುನಾವಣಾಧಿಕಾರಿ ನಮ್ಮ ದೂರವಾಣಿ ಕರೆ ಸ್ವೀಕರಿಸುವದಿಲ್ಲ. ಚುನಾವಣೆ ಬಗ್ಗೆ ಮಾಹಿತಿ ಇಲ್ಲ. ನಾವು ಮತದಾನ ಇಲ್ಲ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಚುನಾವಣೆಯಿಂದ ಆಕಾಂಕ್ಷಿ ಸ್ಥಾನದಿಂದ ಹೊರ ಬಂದಿದ್ದೇವೆ. ಆದರೆ, ತಾ. 11 ರಂದು ಎಲ್ಲಾ ಸದಸ್ಯರಿಗೆ ಮತದಾನವಿದೆ ಎಂಬ ಮಾಹಿತಿ ಗೊಂದಲ ಮೂಡಿಸಿದೆ. ಮತದಾರರ ಪಟ್ಟಿ ನಮಗೆ ಇನ್ನೂ ದೊರೆತಿಲ್ಲ. ಸದಸ್ಯರಿಗೆ ಚುನಾವಣೆ ಮಾಹಿತಿ ಇಲ್ಲದೆ, ಚುನಾವಣೆಗೆ ಮಹತ್ವ ಇಲ್ಲದಂತಾಗಿದೆ. ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿ, ಗೊಂದಲವಿಲ್ಲದೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಸಂಘದ ಸದಸ್ಯರುಗಳಾದ ಸಿದ್ದು ನಾಚಪ್ಪ, ನಿಖಿಲ್ ಕಾಳಪ್ಪ, ಮಚ್ಚಮಾಡ ಗಣಪತಿ ಹಾಗೂ ಚೊಟ್ಟೆಕ್‍ಮಾಡ ಬೋಪಣ್ಣ ಉಪಸ್ಥಿತರಿದ್ದರು.