ಮಡಿಕೇರಿ, ಜ. 10 : ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯಲ್ಲಿ ಮರುಚೇತರಿಕೆ ಹಾಗೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಕೊಡಗು ಪ್ರವಾಸೀ ಉತ್ಸವ - 2019 ಏರ್ಪಡಿಸಿದ್ದು, ತಾ. 11ರಿಂದ (ಇಂದಿನಿಂದ) 3 ದಿನಗಳು ನಡೆಯಲಿವೆÉ. ಈ ಸಂಬಂಧ ಮಂಜಿನಗರಿ ಸನ್ನದ್ಧಗೊಂಡಿದ್ದು, ಗಾಂಧಿ ಮೈದಾನದಲ್ಲಿ ವೇದಿಕೆ ತಯಾರಾಗಿದೆ.ಜಿಲ್ಲಾಡಳಿತ ಪ್ರವಾಸೋದ್ಯಮ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ ಸಹಯೋಗದೊಂದಿಗೆ ಉತ್ಸವ ಏರ್ಪಡಿಸಲಾಗಿದ್ದು, ಆಕರ್ಷಕ ಕಾರ್ಯಕ್ರಮಗಳನ್ನೊಳ ಗೊಂಡಿದೆ. ಸ್ಥಳೀಯ ಸಂಸ್ಕøತಿಯನ್ನು ಬಿಂಬಿಸುವ ಕೊಡವ ಹಾಗೂ ಅರೆಭಾಷೆ ಕಾರ್ಯಕ್ರಮಗಳು, ‘ಸರಿಗಮಪ ಲಿಟ್ಲ್ ಚಾಂಪ್ಸ್’ ಮಕ್ಕಳಿಂದ ಸಂಗೀತ ಸಂಜೆ, ‘ಡ್ಯಾನ್ಸ್ ಕರ್ನಾಟಕ ಖ್ಯಾತಿಯ ಮಕ್ಕಳಿಂದ ನೃತೃತ್ಸೋತ್ಸವ, ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ವೈವಿಧ್ಯ, ದಾರಾವಾಹಿ ಕಲಾವಿದರಿಂದ ನೃತ್ಯ ವೈಭವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದವರಿಂದ ಸಂಗೀತ ರಸಸಂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಉತ್ಸವದಲ್ಲಿ ಮೇಳೈಸಲಿವೆ.

ಫಲ-ಪುಷ್ಪ ಪ್ರದರ್ಶನ

ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ತಾ. 11ರಿಂದ 13ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬೆಳಿಗ್ಗೆ 10 ರಿಂದ ರಾತ್ರಿ 8.30 ರವೆರೆಗೆ ರಾಜಾಸೀಟ್ ಉದ್ಯಾನವನದಲ್ಲಿ ರಂಗು-ರಂಗಿನ ಪುಷ್ಪರಾಶಿಗಳು ಕಣ್ಮನ ಸೆಳೆಯಲಿವೆ. ಇದರೊಂದಿಗೆ ವಿವಿಧ ಆಕರ್ಷಣೀಯ ವಸ್ತುಗಳು ಕಂಗೊಳಿಸಲಿವೆ. ಪುಷ್ಪಗಳಿದಾಲಂಕೃತವಾದ ಎರಡು ಕಾಡಾನೆಗಳ ಮಧ್ಯೆ ಕಾವೇರಿ ಮಾತೆಯ ವಿಗ್ರಹ ಪ್ರಮುಖ ಆಕರ್ಷಣೆಯಾಗಲಿದೆ. ಆಕ್ಟೋಪಸ್, ಅಣಬೆ, ಟೊಮೆಟೊ, ಕ್ಯಾಪ್ಸಿಕಂನಿಂದ ಅಲಂಕೃತ ಮಂಟಪ, ಬಣ್ಣ ಬಣ್ಣದ ಕ್ಯಾಪ್ಸಿಕಂಗ ಳಿಂದ ಸಿಂಗರಿಸಲ್ಪಟ್ಟ ಆನೆ, ಹೂವಿನ ವೀಣೆ, ಗಿಟಾರ್, ವಿಂಟೇಜ್ ಕಾರ್, ಹೀಗೆ ತರಾವರಿ ಕಲಾಕೃತಿಗಳು ಗಮನ ಸೆಳೆಯಲಿವೆ. ಹೊರ ರಾಜ್ಯಗಳಿಂದ ಬಂದಿರುವ ಕಲಾವಿದರು ಹಾಗೂ ಸ್ಥಳೀಯ ಕಲಾವಿದರೂ ಸೇರಿಕೊಂಡು ಕಲಾಕೃತಿಯ ತಯಾರಿಯಲ್ಲಿ ಮಗ್ನರಾಗಿದ್ದಾರೆ.

ಶ್ವಾನ ಪ್ರದರ್ಶನ : ತಾ. 12ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಶ್ವಾನ ಪ್ರದರ್ಶನ ನಡೆಯಲಿದೆ. ವಿವಿಧ ತಳಿಗಳ ಶ್ವಾನಗಳು, ಪೊಲೀಸ್ ಇಲಾಖಾ ಶ್ವಾನಗಳು ವಿವಿಧ ಭಂಗಿಗಳು ಗಮನ ಸೆಳೆಯಲಿದೆ.

ಸ್ಟ್ರೀಟ್ ಫೆಸ್ಟ್: ತಾ. 13ರ ಭಾನುವಾರ ಮಹಾತ್ಮಾಗಾಂಧಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಅಗಲಿದ್ದು, ಬೆಳಿಗ್ಗೆ 8 ಗಂಟೆ ಯಿಂದ ಸಂಜೆ 5 ಗಂಟೆವರೆಗೆ ಜನರಿ ಗಾಗಿ ಈ ರಸ್ತೆ ಮೀಸಲು ಓಪನ್ ಸ್ಟ್ರೀಟ್ ಫೆಸ್ಟಿವಲ್ ಏರ್ಪಡಿಸಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಕಲೆಗಳ ಪ್ರದರ್ಶನವಿರಲಿದ್ದು, ಸಾರ್ವಜನಿಕರು ಸಂಭ್ರಮಿಸಲು ಅವಕಾಶ ಕಲ್ಪಿಸಲಾಗಿದೆ.

ಕಲೆ ಸಂಸ್ಕøತಿಯ ತವರೂರಾದ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪ್ರವಾಸಿ ಉತ್ಸವ ಈ ವರ್ಷದ ಮೊದಲ ಪ್ರಮುಖ ಆಕರ್ಷಣೆಯಾಗಲಿದೆ.

(ಮೊದಲ ಪುಟದಿಂದ)

ಉದ್ಘಾಟನಾ ಸಮಾರಂಭ

ತಾ. 11 ರಂದು (ಇಂದು) ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರು ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವರಾದ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಬೋಜೇಗೌಡ, ಆಯನೂರು ಮಂಜುನಾಥ್, ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.

ಗಾಂಧಿ ಮೈದಾನದಲ್ಲಿ ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30 ಗಂಟೆಯಿಂದ 6.30 ರವರೆಗೆ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 6.30 ರಿಂದ 7.30 ರವರೆಗೆ ಎಂ.ಡಿ. ಪಲ್ಲವಿ ಮತ್ತು ತಂಡದವರಿಂದ ಜುಗಲ್ ಬಂದಿ, ಸಂಜೆ 7.30 ರಿಂದ 10 ಗಂಟೆಯವರೆಗೆ ಸರಿಗಮಪ ಲಿಟಲ್ ಚಾಂಪ್ಸ್ ಮಕ್ಕಳಾದ ಅಭಿನವ್, ಸುಪ್ರಿಯಾ ಜೋಷಿ, ಆಧ್ಯ, ಜ್ಞಾನೇಶ್, ಕೀರ್ತನಾ, ಪುಟ್ಟರಾಜು ಹೂಗಾರ್ ಇವರಿಂದ ಸಂಗೀತ ಸಂಜೆ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಮಕ್ಕಳಿಂದ ನೃತ್ಯ ವೈಭವ ನಡೆಯಲಿದೆ.

ಸಂಜೆ 4.30 ಗಂಟೆಗೆ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್, ನಗರಸಭೆಯ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

- ಸಂತೋಷ್