ಮಡಿಕೆÉೀರಿ, ಜ. 11: ಪ್ರಕೃತಿಯ ಮುನಿಸಿನೊಂದಿಗೆ ನಲುಗಿ ಹೋಗಿದ್ದ ಕೊಡಗಿನ ಪ್ರವಾಸೋದ್ಯಮಕ್ಕೆ ಪುನಶ್ಚೇತನದೊಂದಿಗೆ, ಹೊಸತನ ಕಲ್ಪಿಸುವಲ್ಲಿ ಇಂದಿನಿಂದ ಮೂರು ದಿನಗಳ ತನಕ ಆಯೋಜಿಸಿರುವ ಕೊಡಗು ಪ್ರವಾಸಿ ಉತ್ಸವ ಕಳೆ ಕಟ್ಟಿದಂತಿದೆ. ಗಾಂಧಿ ಮೈದಾನದ ವಿಶಾಲ ವೇದಿಕೆಯಲ್ಲಿ ಸಂಜೆಗತ್ತಲೆ ನಡುವೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ಬಣ್ಣದ ಚಿತ್ತಾರಗಳ ಮೆರುಗು, ತಂಗಾಳಿಯ ತಂಪಿನೊಳು ಇಂಪಾದ ಗಾನ ಸುಧೆಯೊಂದಿಗೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಕಲಾತಂಡದ ಕುಣಿತದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು. ಆ ಬೆನ್ನಲ್ಲೇ ‘ಗೆಜ್ಜೆತಂಡ್’ ರೂಪಕ ಇನ್ನಿತರ ನೃತ್ಯಗಳು ಜನಮನ ಸೆಳೆದರೆ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರ ಸಂಗೀತ ಸುಧೆ ಪ್ರೇಕ್ಷಕರ ಮನಸೂರೆಗೊಳ್ಳುವಂತಾಯಿತು. ಲಿಟ್ಲ್ ಚಾಂಪಿಯನ್ ಖ್ಯಾತಿಯ ಮಕ್ಕಳು ಕೂಡ ಕೊಡಗು ಪ್ರವಾಸಿ ಉತ್ಸವಕ್ಕೆ ಹೊಸತನದ ಮೆರುಗು ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಜನಾರ್ದನ, ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ಹೋಂಸ್ಟೇ ಅಸೋಸಿಯೇಶನ್ ಅಧ್ಯಕ್ಷ ಚಂಗಪ್ಪ, ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಘದ ಅಧ್ಯಕ್ಷ ಸತ್ಯ ಇತರರಿದ್ದರು.
ಒಟ್ಟಿನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಜನಮಾನಸದಲ್ಲಿ ಮೂಡಿದ್ದ ಕರಾಳ ನೆನಪುಗಳು ಮರೆಯಾಗಿ, ಒಂದಿಷ್ಟು ಹರ್ಷೋಲ್ಲಾಸದೊಂದಿಗೆ ಹೊಸತನದ ಬದುಕಿನೆಡೆಗೆ ಸಾಗುವತ್ತ ಮತ್ತು ಪ್ರವಾಸೋದ್ಯಮ ಪುನಶ್ಚೇತನ ಕಂಡುಕೊಳ್ಳುವತ್ತ ಈ ಪ್ರವಾಸಿ ಉತ್ಸವ ಸಹಕಾರಿಯಾಗಿ ಗೋಚರಿಸುವಂತಿದೆ.