ಬೆಂಗಳೂರು, ಜ. 10: ವನ್ಯಜೀವಿಗಳ ಧಾಳಿಯಿಂದ ಸಾವಿಗೀಡಾಗುವ ಮಂದಿಯ ಕುಟುಂಬ ವರ್ಗಕ್ಕೆ ಪರಿಹಾರ ಧನ ಮೊತ್ತವನ್ನು ಏರಿಕೆಗೊಳಿಸಿ ಸರಕಾರ ಘೋಷಿಸಿದೆ.ಇದುವರೆಗೆ ನೀಡುತ್ತಿದ್ದ ರೂ. 5 ಲಕ್ಷ ಪರಿಹಾರ ಮೊತ್ತವನ್ನು ಇದೀಗ ರೂ. 10 ಲಕ್ಷಕ್ಕೆ ಏರಿಕೆಗೊಳಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪ್ರತಿ ವರ್ಷ ವನ್ಯಜೀವಿಗಳ ಧಾಳಿಯಿಂದ ಸುಮಾರು 45 ಮಂದಿ ಸಾವಿಗೀಡಾಗುತ್ತಿದ್ದಾರೆ. ಹಾಸನ, ರಾಮನಗರ, ಕೊಡಗು, ತುಮಕೂರು ಹಾಗೂ ಮೈಸೂರಿನ ನಾಗರಹೊಳೆ ವಲಯದಲ್ಲಿ ಈ ಧಾಳಿ- ಸಾವು ಪ್ರಕರಣಗಳು ಕಂಡುಬಂದಿವೆ.ಮಹಾರಾಷ್ಟ್ರದಲ್ಲಿ ಪರಿಹಾರ ಮೊತ್ತ ರೂ. 15 ಲಕ್ಷ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಸಾವು ಸಂಭವಿಸುತ್ತಿರು ವದು ಪ್ರಮುಖವಾಗಿ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮಗಳ ಸನಿಹದಲ್ಲಿರುವಂತಹ ಗ್ರಾಮಗಳಲ್ಲಿ ಎಂದು ವರದಿ ತಿಳಿಸಿದೆ.
(ಮೊದಲ ಪುಟದಿಂದ) ಮುಖ್ಯವಾಗಿ ಮಾನವ ವಾಸಸ್ಥಾನದ ವಿಸ್ತರಣೆಯಾ ಗುತ್ತಿದ್ದಂತೆ ಆನೆಗಳು ಸಂಚರಿಸುವ ಪ್ರದೇಶಗಳು ವ್ಯತ್ಯಾಸವಾಗುತ್ತಿದೆ. ಸುಮಾರು 6 ಸಾವಿರ ಆನೆಗಳು ಕರ್ನಾಟಕದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿವೆ. ಈ ಸ್ಥಳಗಳಲ್ಲಿಯೇ ಆನೆ- ಮಾನವ ಸಂಘರ್ಷ ಅತಿಯಾಗಿ ಗೋಚರಿಸಿದೆ.
ಸಭೆಯಲ್ಲಿ ಮಾತನಾಡಿದ ವನ್ಯಜೀವಿ ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಪ್ರಸಕ್ತ ಕೃಷಿಕರಿಗೆ ವನ್ಯಜೀವಿ ಧಾಳಿಯಿಂದ ಉಂಟಾಗುತ್ತಿರುವ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಏರಿಕೆಗೊಳಿಸಬೇಕಾಗಿ ಕೋರಿದ್ದಾರೆ. ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಆ ಬೆಳೆಗಳ ನಷ್ಟಕ್ಕೆ ಪರಿಹಾರ ಮೊತ್ತವನ್ನು ಕಲ್ಪಿಸಬೇಕಾಗಿ ಮನವಿ ಮಾಡಿದ್ದಾರೆ.