ಮಡಿಕೇರಿ, ಜ. 10: ಕೊಡವ ಕುಲಶಾಸ್ತ್ರ ಅಧ್ಯಯನ ಪುನರಾರಂಭವಾಗಿರುವ ಬಗ್ಗೆ ಸಿ.ಎನ್.ಸಿ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣದಲ್ಲೂ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ವಿಕಾಸ ಸೌಧ ಕಚೇರಿಯಲ್ಲಿ ಭೇಟಿ ಮಾಡಿ ಕೊಡವರ ನ್ಯಾಯಸಮ್ಮತವಾದ ಬೇಡಿಕೆಯ ಬಗ್ಗೆ ಪರಿಪೂರ್ಣವಾಗಿ ಮನವರಿಕೆ ಮಾಡಿಕೊಡಲಾಯಿತು.

ವಕೀಲ ಮತ್ತು ಎ.ಐ.ಸಿ.ಸಿ. ವಕ್ತಾರ ಬ್ರಜೇಶ್ ಕಾಳಪ್ಪ ಅವರು ಮುಖ್ಯಮಂತ್ರಿಯವರಿಗೆ ಕೊಡವರ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ತನ್ನ ಅಧಿಕಾರ ಅವಧಿಯಲ್ಲಿ ನ್ಯಾಯಸಮ್ಮತವಾಗಿ ಯಾವದೇ ತಾರತಮ್ಯವಿಲ್ಲದೆ ನಡೆಸುವದು ಮಾತ್ರವಲ್ಲ, ವರದಿಯನ್ನು ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿಗೆ ಶಿಫಾರಸ್ಸಿನೊಂದಿಗೆ ಕಳುಹಿಸಿ ಕೊಡಲಾಗುವದು ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತನ್ನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ವರದಿಯನ್ನು ತ್ವರಿತಗೊಳಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ಬಳಸಿಕೊಂಡು 3 ತಿಂಗಳ ಗಡುವಿನಲ್ಲಿ ಅಂತಿಮಗೊಳಿಸುವದು ಮತ್ತು ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ವಿಜ್ಞಾನಿಗಳಾದ ಡಾ. ಸಿ.ಎಸ್. ದ್ವಾರಕನಾಥ್ ಮತ್ತು ವಿಶ್ವವಿಖ್ಯಾತ ರಾಜಕೀಯ ತಜ್ಞರಾದ ಡಾ. ಬಲವಿರ್ ಅರೋರ ಅಂತವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮುಖಾಂತರ ವೈಜ್ಞಾನಿಕ ಮತ್ತು ವಿವೇಚನ ಪೂರಕವಾಗಿ ನಿರ್ವಹಿಸಿ ಸಮಗ್ರ ವರದಿಯನ್ನು ಏಪ್ರಿಲ್ 2019 ರೊಳಗೆ ಸಲ್ಲಿಸುವಂತೆ ನಿರ್ದೇಶಿಸಿದರು ಹಾಗೂ ಈ ಕಾರ್ಯಕ್ರಮಕ್ಕೆ ಯಾವದೇ ಆರ್ಥಿಕ ಅಡಚಣೆಯಾಗದಂತೆ ನೋಡಿಕೊಳ್ಳುವ ಕುರಿತಾಗಿ ಸಿ.ಎನ್.ಸಿ. ಸಂಚಾಲಕ ಎನ್.ಯು. ನಾಚಪ್ಪ ಅವರಿಗೆ ಭರವಸೆ ನೀಡಿದರು.

ತಂಡದಲ್ಲಿ ಶಾಸಕಿ ವೀಣಾ ಅಚ್ಚಯ್ಯ, ಹಿಂದುಳಿದ ಆಯೋಗದ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಜೊತೆಗೆ ಸಿ.ಎನ್.ಸಿ.ಯ ಕಲಿಯಂಡ ಪ್ರಕಾಶ್, ಲೆ.ಕ. ಪಾರ್ವತಿ (ನಿ), ಅಜ್ಜಿಕುಟ್ಟೀರ ಲೋಕೇಶ್, ಚಂಬಾಂಡ ಜನತ್‍ಕುಮಾರ್, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನೇಶ್, ಅಪ್ಪಾರಂಡ ಪೂವಣ್ಣ ಉಪಸ್ಥಿತರಿದ್ದರು.