ವೀರಾಜಪೇಟೆ, ಜ. 10: ಕೇರಳದ ಹುಲಿಕಲ್‍ನ ಬೈತೂರಿನ ಆದಿ ಬೈತೂರು ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಊಟ್ ಮಹೋತ್ಸವವು ತಾ. 22 ರಿಂದ 25 ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ದಿವಾಕರನ್ ತಿಳಿಸಿದರು.

ಬೈತೂರು ದೇವಾಲಯದ ಆಡಳಿತ ಮಂಡಳಿಯಿಂದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿವಾಕರನ್, ತಾ. 22 ರಂದು ಕೊಡಗಿನ ದೇವಣಗೇರಿಯ ಪುಗ್ಗೇರ ಕುಟುಂಬದ ಎತ್ತು ಪೋರಾಟ, 11 ಗಂಟೆಗೆ ದೇವರ ಮೂಲ ಭಂಡಾರದಲ್ಲಿ ಅಕ್ಕಿ ಅಳೆಯುವದು. ತಾ. 23 ರಂದು ದೇವರ ಉತ್ಸವದ ಅಂಗವಾಗಿ ಸಾಂಸ್ಕøತಿಕ ಸಮ್ಮೇಳನ, ರಾತ್ರಿ 7 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಕೇರಳದ ಸಂಸದ ಕೆ.ಕೆ. ರಾಗೇಶ್, ಕೇರಳದ ಮಲಬಾರ್ ದೇವಸ್ಥಾನ ಬೋರ್ಡ್ ಅಧ್ಯಕ್ಷ ವಾಸುದೇವನ್, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಕೇರಳದ ಶಾಸಕ ಕೆ.ಸಿ. ಜೋಸೆಫ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಕಣ್ಣೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಪಿ. ದಿವ್ಯ ಭಾಗವಹಿಸಲಿದ್ದಾರೆ. ಅದೇ ದಿನ ರಾತ್ರಿ 8.30 ಗಂಟೆಗೆ ಪುಗ್ಗೇರ ಕುಟುಂಬದಿಂದ ವಿಶೇಷ ಪೂಜೆ ಹಾಗೂ ಕೊಡಗಿನ ಕೊಡವ ಸಾಹಿತ್ಯ ಅಕಾಡೆಮಿಯಿಂದ ಬೊಳಕಾಟ್, ಉಮ್ಮತ್ತಾಟ್ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ದೇವಾಲಯದ ಟ್ರಸ್ಟಿ ಪುಗ್ಗೇರ ಪೊನ್ನಪ್ಪ ಮಾತನಾಡಿ, ತಾ. 24 ರಂದು ಉತ್ಸವದ ದೊಡ್ಡ ಹಬ್ಬ ಪತ್ತುಊಟ್ ನಡೆಯಲಿದೆ. ಹುಲಿಕಲ್‍ನ ಮುಖ್ಯ ಬೀದಿಗಳಲ್ಲಿ ಪಂಚವಾದ್ಯಗಳೊಂದಿಗೆ ಮೆರವಣಿಗೆ, ಅಪರಾಹ್ನ 2.30 ಗಂಟೆಗೆ ಆನೆ ಅಂಬಾರಿ ಉತ್ಸವ ಮೂರ್ತಿ ಯೊಂದಿಗೆ ದೇವಾಲಯದ ಏಳು ಸುತ್ತು ಪ್ರದಕ್ಷಿಣೆ ನಡೆಯಲಿದೆ.

ತಾ. 25 ರಂದು ಕೊಡಗಿನ ದೇವರುಗಳು ಮೈದುಂಬಿ ಬಂದು ದೇವರ ದರ್ಶನ ಜರುಗಲಿದೆ. ಭಕ್ತಾದಿಗಳಿಗೆ ಉತ್ಸವದ ಎಲ್ಲ ದಿನಗಳಲ್ಲು ಅಪರಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಕಾರ್ಯಕ್ರಮವಿದೆ ಎಂದರು.

ಬೈತೂರು ದೇವಾಲಯದ ಪುಗ್ಗೇರ ರಂಜಿ ದೇವಯ್ಯ ಮಾತನಾಡಿ, ಕೊಡಗಿನ ಅವಿಭಾವನಾತ್ಮಕ ಸಂಬಂಧ ಹೊಂದಿರುವ ಕೇರಳದ ಹುಲಿಕಲ್‍ನ ಆದಿ ಬೈತೂರು ದೇವಸ್ಥಾನದ ಊಟ್ ಮಹೋತ್ಸವಕ್ಕೆ ಅನ್ನದಾನಕ್ಕಾಗಿ ಅಕ್ಕಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡಬಹುದು. ಬೈತೂರು ದೇವಾಲಯದ ಭೋಜನಾಲಯದ ಕಾಮಗಾರಿ ಇನ್ನು ಪ್ರಗತಿಯಲ್ಲಿದೆ. ದಾನ ನೀಡಲು ಇಚ್ಛಿಸುವ ದಾನಿಗಳು 9663977470 ಹಾಗೂ 9663977304 ನ್ನು ಸಂಪರ್ಕಿಸ ಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಕೆ.ವಿ. ಗೋಪಾಲನ್, ಘೋಷಿತ ಸಮಿತಿ ಅಧ್ಯಕ್ಷ ಬಿ. ಕುಂಞರಾಮನ್, ಉಪಾಧ್ಯಕ್ಷ ಟಿ.ಎಸ್. ಪ್ರದೀಪ್, ಬೈತೂರು ಕುಟುಂಬದ ಪುಗ್ಗೇರ ಎಸ್. ನಂದ, ಚೇಂದ್ರಿಮಾಡ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.