ಪೊನ್ನಂಪೇಟೆ, ಜ. 10: ಸಹಕಾರ ಸಂಘಗಳ ಬೈಲಾ ನಿಯಮಾನುಸಾರ ಮತದಾನದ ಹಕ್ಕು ಕಳೆದುಕೊಂಡಿರುವ ಸಂಘದ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಗೆ ಮನ್ನಣೆ ನೀಡಿರುವ ರಾಜ್ಯ ಉಚ್ಛ ನ್ಯಾಯಾಲಯವು ಸಂಘದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿದ್ದು, ಇದೊಂದು ಮಹತ್ವದ ಬೆಳವಣಿಗೆಯಾಗಿದೆ.ಇಲ್ಲಿಗೆ ಸಮೀಪದ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1400ಕ್ಕೂ ಅಧಿಕ ಸದಸ್ಯರಿದ್ದು, ಈ ಪೈಕಿ ಈ ಬಾರಿಯ ಚುನಾವಣೆಯಲ್ಲಿ ಸಂಘದ ಬೈಲಾದ ನಿಯಮದಂತೆ ಕೇವಲ 506 ಮಂದಿಗೆ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಇದನ್ನು ಪ್ರಶ್ನಿಸಿ ಕೆ.ಎಸ್. ಮನುಸೋಮಯ್ಯ, ಕೆ.ಎಂ. ನಿತಿ ಪೂಣಚ್ಚ, ಎಸ್.ಎನ್. ಹರೀಶ್ ಹಾಗೂ ವಿ.ಪಿ. ನಂದಿನಿ ಅವರುಗಳು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠವು ಮತದಾನದ ಹಕ್ಕು ಕಸಿದುಕೊಳ್ಳುವ ಅಧಿಕಾರ ಸಹಕಾರ ಸಂಘಗಳಿಗೆ ಇರುವದಿಲ್ಲ ಎಂದು ಉಲ್ಲೇಖಿಸಿ ಸಂಘದ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸದಸ್ಯರುಗಳಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಂತಾಗಿದೆ. ಆದರೆ, ಚುನಾವಣೆ ತಾ. 12ರಂದು ನಡೆಯಲಿದ್ದು, ಚುನಾವಣಾಧಿಕಾರಿ ಯಾವ ರೀತಿಯ ಕ್ರಮ ಕೈಗೊಳ್ಳುವರೆಂದು ತಿಳಿದುಬಂದಿಲ್ಲ.

-ರಫೀಕ್ ತೂಚಮಕೇರಿ.