ಮಡಿಕೇರಿ, ಜ. 10: ಮಳೆಹಾನಿ ಪರಿಹಾರ ಧನ ವಿತರಣೆಗೂ ನಗರಸಭೆಯ ನೌಕರನೊಬ್ಬ ಫಲಾನುಭವಿಗಳಿಂದ ಕಮಿಷನ್ ಬೇಡಿಕೆಯಿಡುತ್ತಿರುವದಾಗಿ ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆರೋಪ ವ್ಯಕ್ತಗೊಂಡು ನೌಕರನ ವಿರುದ್ಧ ನಗರಸಭಾ ಸದಸ್ಯರು ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ನಂದಕುಮಾರ್ ಮಾತನಾಡಿ, ನಗರಸಭೆಯ ನೌಕರನಾಗಿರುವ ಜೀವನ್ ಎಂಬಾತ ಮಳೆಹಾನಿ ಪರಿಹಾರ ಚೆಕ್ ವಿತರಣೆಗೆ ಫಲಾನುಭವಿಗಳಿಂದ ಕಮಿಷನ್ ಬೇಡಿಕೆ ಇಡುತ್ತಿರುವದಾಗಿ ಸಾಕಷ್ಟು ದೂರುಗಳಿವೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ರಮೇಶ್ ಈ ಬಗ್ಗೆ ತನ್ನ ಗಮನಕ್ಕೆ ಬಂದಿದ್ದು, ಮೇಲಾಧಿಕಾರಿಗೆ ದೂರು ನೀಡಲಾಗಿದೆ. ಫಲಾನುಭವಿಯೊಬ್ಬರಿಂದ 23 ಸಾವಿರ ರೂ. ಹಣಕ್ಕೆ 5 ಸಾವಿರ ಕಮಿಷನ್ ಕೇಳಿರುವದಾಗಿ ತಿಳಿದುಬಂದಿದೆ ಎಂದು ಆಯುಕ್ತರು ನುಡಿದರು. ಬಿಜೆಪಿ ಸದಸ್ಯ ಉಣ್ಣಿಕೃಷ್ಣ ಮಾತನಾಡಿ, ನಗರಸಭೆ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದರು. ಕಾಂಗ್ರೆಸ್ ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ‘ಬೆಂಕಿ ಬಿದ್ದ ಮನೆಯಿಂದ ಬಿದಿರು ಎಳೆದೊಯ್ದ ಜಾಣ’ ಎಂಬ ಗಾದೆ ಮಾತಿನಂತೆ ನಗರಸಭೆಯ ಸಿಬ್ಬಂದಿ ಸ್ವಾರ್ಥ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ ಹೊರತು, ಜನಪರವಾಗಿ ದುಡಿಯುತ್ತಿಲ್ಲ, ಕೈ ಬಿಸಿ ಮಾಡಿದರೆ ಮಾತ್ರ ಇಲ್ಲಿ ಕೆಲಸಗಳಾಗುತ್ತವೆ ಎಂದು ನೇರ ಆರೋಪ ಮಾಡಿದರು. ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಉಣ್ಣಿಕೃಷ್ಣ ಇವರುಗಳು ನಗರಸಭಾ ನೌಕರರಾದ ಜೀವನ್, ಲೋಹಿತ್, ಶಿವಕುಮಾರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಆರ್.ಓ. ತಾಹಿರ್ ಮಾತನಾಡಿ, ಪ್ರಾಕೃತಿಕ ವಿಕೋಪದ ಸಂದರ್ಭ ನಗರಸಭೆಯ ಎಲ್ಲಾ ನೌಕರರು ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ. ತಪ್ಪು ಮಾಡಿದವರ್ಯಾರೆ ಆದರೂ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ನಿಜ. ಆದರೆ ತಪ್ಪು ನಡೆದಿರುವದು ಸತ್ಯವೇ ಎಂಬ ಬಗ್ಗೆ ನಗರಸಭೆ ಪರಿಶೀಲನೆ ನಡೆಸಿ ನಂತರ ತೀರ್ಮಾನವಾಗಬೇಕು ಎಂದರು. ನೌಕರ ಜೀವನ್ ಮಾತನಾಡಿ, ಸದಸ್ಯರ ಆರೋಪದಂತೆ ಯಾವದೇ ಸಮಸ್ಯೆಗಳಿಲ್ಲ. ಎಲ್ಲವನ್ನೂ ಬಗೆಹರಿಸಲಾಗಿದೆ ಎಂದಾಗ ಕೆರಳಿದ ನಂದಕುಮಾರ್ ಸಮಸ್ಯೆ ಸರಿಮಾಡೋಕೆ ನೀನ್ಯಾರಯ್ಯ? ಎಂದು ಪ್ರಶ್ನಿಸಿದರಲ್ಲದೆ, ಜೀವನ್ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು. ಮತ್ತೊಂದು ಭಾರೀ ಹಗರಣ ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಸದಸ್ಯರು ಆಗ್ರಹಿಸಿದರು.

ಕಸ ವಿಲೇವಾರಿ ಕಿರಿಕಿರಿ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಅಶುಚಿತ್ವ ತಾಂಡವವಾಡುತ್ತಿದೆ. ಇದಕ್ಕೆ ಅಧ್ಯಕ್ಷರು ಹಾಗೂ ಆಯುಕ್ತರ ನಿರ್ಲಕ್ಷ್ಯವೇ ಕಾರಣ ಎಂದು ಸದಸ್ಯ ಕೆ.ಎಸ್. ರಮೇಶ್ ಆಪಾದಿಸಿ ಮಾತು ಮುಂದುವರೆಸುತ್ತಿದ್ದಂತೆ ಕಾಂಗ್ರೆಸ್‍ನ ನಾಮನಿರ್ದೇಶಿತ ವೆಂಕಟೇಶ್ ಮಧ್ಯಪ್ರವೇಶಿಸಿ ಒಂದೇ ವಿಚಾರವನ್ನು ಎಳಿತಾ ಇರ್ಬೇಡಿ ಎಂದು ಕುಟುಕಿದಾಗ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಿಜೆಪಿ ಸದಸ್ಯರು ಹಾಗೂ

(ಮೊದಲ ಪುಟದಿಂದ) ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದಸ್ಯೆ ವೀಣಾಕ್ಷಿ ಮಾತನಾಡಿ, ವಾರ್ಡ್‍ಗೆ ಭೇಟಿ ನೀಡುವಂತೆ ಆಯುಕ್ತರ ಬಳಿ ಮನವಿ ಮಾಡಿದರೆ ಅವರು ‘ನನಗೆ ಟೈಂ ಇಲ್ಲ’ ಎಂದು ಹೇಳ್ತಾರೆ ಇದು ಸರಿಯೇ? ಜನರಿಗೆ ನಾವು ಏನೆಂದು ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಷ್ಟು ಸಮಸ್ಯೆ ಬಗೆಹರಿಸಿ

ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ ನಗರಸಭೆ ಆಡಳಿತಾವಧಿ ಅಂತಿಮ ಘಟ್ಟದಲ್ಲಿದ್ದು, ಮಡಿಕೇರಿಯಲ್ಲಿ ಆಗಬೇಕಿರುವ ಕೆಲಸಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡುವಂತೆ ಅಧ್ಯಕ್ಷರಿಗೆ ಸಲಹೆಯಿತ್ತರು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಮನೆಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದವರ ಮೇಲೆ ನಗರಸಭೆಯಿಂದ ಒತ್ತಡ ಹೇರುವ ಕೆಲಸವಾಗಲಿ. ನಗರಸಭೆಯ ಹಣ ದುರುಪಯೋಗಪಡಿಸಿಕೊಂಡ ಸಜಿತ್, ಸ್ವಾಮಿ ಮೇಲಿನ ತನಿಖೆ ಯಾವ ಹಂತದಲ್ಲಿದೆ ಈ ಬಗ್ಗೆ ಮಾಹಿತಿ ಪಡೆದು ಕಾರ್ಯಪ್ರವೃತ್ತರಾಗಿ. ನಗರಸಭೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುದಾನ ನೀಡುವಂತೆ ಮನವಿ ಮಾಡಲು ಸರ್ಕಾರದ ಬಳಿ ನಿಯೋಗ ತೆರಳಲು ಕೂಡಲೇ ಪ್ರಯತ್ನ ಮಾಡಿ; ನಾವು ಸಹಕಾರ ಕೊಡುತ್ತೇವೆ ಎಂದು ಭರವಸೆಯಿತ್ತರು.

ಮತದಾರರ ಚೀಟಿ ಗೊಂದಲ

ಸದಸ್ಯ ನಂದಕುಮಾರ್ ಮಾತನಾಡಿ, ಮತದಾರರ ಚೀಟಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಇದಕ್ಕೆ ನಗರಸಭಾ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಯೇ ಕಾರಣ ಎಂದರು. ಫಾರಂ-3 ಗೊಂದಲ ಹಾಗೆಯೇ ಮುಂದುವರೆದಿದೆ ಎಂದು ಸದಸ್ಯ ಚುಮ್ಮಿದೇವಯ್ಯ ಹೇಳಿದರು. ಕೊಡಗು ಪ್ರವಾಸಿ ಉತ್ಸವ ತಾ. 11ರಿಂದ ನಡೆಯಲಿದ್ದು, ನಗರದಲ್ಲಿ ಶುಚಿತ್ವಕ್ಕೆ ಒತ್ತು ನೀಡುವಂತೆ ಸದಸ್ಯ ಉದಯಕುಮಾರ್ ಆಗ್ರಹಿಸಿದರು.

ಯುಜಿಡಿ ವಿರುದ್ಧ ಕಿಡಿ

ಯುಜಿಡಿ ಕಾಮಗಾರಿ ವಿರುದ್ಧ ಕಿಡಿಕಾರಿದ ಪಿ.ಡಿ. ಪೊನ್ನಪ್ಪ, ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ, ಯುಜಿಡಿಯಿಂದಾಗಿ ಮಡಿಕೇರಿ ನಗರ ಸಂಪೂರ್ಣ ಹಾಳಾಗಿದೆ. ಒಂದು ವಾರದೊಳಗಾಗಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ ನಿಮ್ನ ಎಳ್ಕೊಂಡು ಬಂದು ಕೆಲ್ಸ ಮಾಡ್ಸೋಕು ನಾನ್ ಹಿಂಜರಿಯಲ್ಲ ಎಂದು ಸಂಬಂಧಿಸಿದ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಯುಜಿಡಿ ಅರ್ಧಂಬರ್ಧ ಕಾಮಗಾರಿಯಿಂದಾಗಿ ಅಪಘಾತದಂತಹ ಸಮಸ್ಯೆಗಳಾದಾಗ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೂ ಸಂಬಂಧಿಸಿದ ಅಧಿಕಾರಿ ನಿರ್ಲಕ್ಷ್ಯ ತೋರುತ್ತಾರೆ ಎಂದು ಸದಸ್ಯರಾದ ಸಂಗೀತ ಪ್ರಸನ್ನ ಹಾಗೂ ಅನಿತಾ ಪೂವಯ್ಯ ಆಕ್ರೋಶ ವ್ಯಕ್ತಪಡಿಸಿದರು. ಮಲ್ಲಿಕಾರ್ಜುನ ನಗರ ಹಿಂದೂ ರುದ್ರಭೂಮಿ ರಸ್ತೆ ತೀರಾ ಹಾಳಾಗಿದೆ ಎಂದು ಸದಸ್ಯ ಉದಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದಾಗ ರಸ್ತೆ ರಿಪೇರಿಗೆ ಅನುದಾನ ನೀಡುವದಾಗಿ ಅಧ್ಯಕ್ಷರು ಭರವಸೆಯಿತ್ತರು.