ಮಡಿಕೇರಿ, ಜ. 10 : ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಯಾರಿಂದಲೂ ಅನುಕಂಪದ ಮಾತು ಬೇಡ. ಅನುಭೂತಿ ಬೇಕು; ಅವರ ಮುಂದಿನ ಭವಿಷ್ಯವನ್ನು ರೂಪಿಸುವ ಕಾರ್ಯಯೋಜನೆಗಳಿಗೆ ಕೈಜೋಡಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕರೆ ನೀಡಿದರು.ಯಾರಿಗಾದರೂ ಸುಖ ಬಂದಾಗ ಅಂತಹ ಸಂತೋಷಗಳಲ್ಲಿ ಭಾಗಿಯಾಗುವ ನಾವು; ಕಷ್ಟ ಬಂದಾಗ ಪಲಾಯನವಾದಿಗಳಾಗದೆ ಅನುಭೂತಿಯಿಂದ ಸೇವೆ ಸಲ್ಲಿಸುವ ಮೂಲಕ ಆಸರೆ ಕಲ್ಪಿಸಬೇಕಲ್ಲದೆ; ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕೆಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕರೆ ನೀಡಿದರು. ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾನಿಯ ಸಂತ್ರಸ್ತರಿಗೆ ಆರ್ಥಿಕ ಸಹಾಯದೊಂದಿಗೆ ಸಾಂತ್ವನದ ನುಡಿಯಾಡಿದ ಅವರು; ಪ್ರತಿಯೊಬ್ಬರು ತಮಗಿಂತಲೂ ಕಷ್ಟದಲ್ಲಿ ಇರುವವರನ್ನು ಸ್ಮರಿಸುವಂತಾಗಿ ಇನ್ನೊಬ್ಬರ ನೋವಿಗೆ ಸ್ಪಂದಿಸಬೇಕೆಂದು ತಿಳಿ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಯೋಜಿಸಿದ್ದ ಸಂತ್ರಸ್ತರಿಗೆ ಸಾಂತ್ವನದೊಂದಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಾಧಿಕಾರಿಗಳು ಜಪಾನ್, ಇಂಡೋನೇಷಿಯಾದಂತಹ ದೇಶಗಳು ಆಕ್ರಮಣಕ್ಕೆ ಒಳಗಾಗಿದ್ದಲ್ಲದೆ, ಪ್ರಾಕೃತಿಕ ದುರಂತದ ನಡುವೆ ಜಗತ್ತಿನಲ್ಲಿ ಸಾರ್ವಬೌಮತ್ವ ಸಾಧಿಸಿದ್ದನ್ನು ಉಲ್ಲೇಖಿಸಿದರು.

ಆ ದಿಸೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಕುಟುಂಬಗಳು ಸರಕಾರ ಹಾಗೂ ಸಂಘ ಸಂಸ್ಥೆಗಳ ಸಹಾಯಹಸ್ತದಿಂದ ಬದುಕು ಕಂಡುಕೊಳ್ಳಲು ಆತ್ಮಸ್ಥೈರ್ಯದಿಂದ ಮುಂದೆ ಸಾಗಬೇಕೆಂದು ಕರೆ ನೀಡಿದರು.

ಪ್ರಾಕೃತಿಕ ವಿಕೋಪದ ನಷ್ಟವನ್ನು ಯಾರಿಂದಲೂ ತುಂಬಲು ಅಥವಾ ತಪ್ಪಿಸಲು ಅಸಾಧ್ಯವೆಂದು ಬಣ್ಣಿಸಿದ ಹೆಗ್ಗಡೆ ಅವರು; ಕಷ್ಟಗಳನ್ನು ಎದುರಿಸುವ ಮೂಲಕ ಭವಿಷ್ಯದ ಜೀವನ ಹಾದಿಯಲ್ಲಿ ನೆಮ್ಮದಿ ಕಂಡುಕೊಳ್ಳಲು ದೃಢಸಂಕಲ್ಪದ ಹೆಜ್ಜೆ ಇಡುವದು ಅವಶ್ಯಕವೆಂದು ಉಪಕತೆಗಳೊಂದಿಗೆ ತಿಳಿ ಹೇಳಿದರು.

450 ಕೋಟಿ ಸಾಲ : ಕೊಡಗು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಐಡಿಬಿಐ ಬ್ಯಾಂಕ್ ಮುಖಾಂತರ 450 ಕೋಟಿ ರೂ. ಹಣವನ್ನು 3600 ಮಂದಿಗೆ ಸಾಲ ಸೌಲಭ್ಯವಾಗಿ ಕಲ್ಪಿಸಲಾಗಿದೆ ಎಂದು ನೆನಪಿಸಿದ ಅವರು; ಪ್ರಾಕೃತಿಕ ಹಾನಿಯ ದಿನಗಳಲ್ಲಿ ಬಡ್ಡಿಯನ್ನು ತುಂಬುವ ಕೆಲಸ ಸಂಸ್ಥೆ ಮಾಡಿದ್ದಾಗಿ ವಿವರಿಸಿದರು.

ವಿಮಾ ಯೋಜನೆ : ಪ್ರಾಕೃತಿಕ ಹಾನಿ ಸೇರಿದಂತೆ ಯಾವದೇ ವಿಪತ್ತು ಎದುರಾದರೆ ಆಗುವ ಹಾನಿ ತುಂಬಲು ಪ್ರತಿ ಹಂತದಲ್ಲಿ ವಿಮಾ ಯೋಜನೆ ಅವಶ್ಯಕವೆಂದು ನೆನಪಿಸಿದ ಅವರು, ಆ ದಿಸೆಯಲ್ಲಿ ಕ್ಷೇತ್ರದ ಪ್ರತಿನಿಧಿಗಳು ಜನರಲ್ಲಿ ತಿಳುವಳಿಕೆಯೊಂದಿಗೆ ಜೀವ ರಕ್ಷಣೆಗೆ ಒತ್ತು ನೀಡಲಾಗುವದು ಎಂದರು.

ಸ್ವಉದ್ಯೋಗÀ ಚಿಂತನೆ: ಇಂದು ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಮಹಿಳೆಯರು ಸೇರಿದಂತೆ ಯುವಕರು ಸ್ವಾಲಂಬನೆಯ ಬದುಕು ಕಂಡುಕೊಳ್ಳಲು ಸ್ವಉದ್ಯೋಗ ತರಬೇತಿ ಪಡೆಯಲು ಕರೆ ನೀಡಿದ ಅವರು, ಈ ದಿಸೆಯಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಸೇವಾ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

ನೋವು ಮರೆಯಾಗಲಿ : 2019ನೇ ವರ್ಷವು ಕಳೆದ ಸಾಲಿನ ನೊವು ಮರೆಯುವಂತಾಗಿ, ಉತ್ತಮ ಜೀವನದೊಂದಿಗೆ ಹಿಂದಿನ ಬದುಕು ಮರಳಿ ಪಡೆಯುವಲ್ಲಿ ಕ್ಷೇತ್ರ ದೇವ ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸುವದಾಗಿ ಅಂತಃ ಕರಣಪೂರ್ವಕ ನುಡಿದ ಧರ್ಮಾಧಿಕಾರಿ ಸರಕಾರದ ನಿಧಿಗೆ ರೂ. 2 ಕೋಟಿಯೊಂದಿಗೆ ಜಿಲ್ಲೆಯ ಸಂತ್ರಸ್ತರ ಬದುಕಿಗಾಗಿ ರೂ. 8 ಕೋಟಿ ಮೂಲ ಧನವನ್ನು ಸಣ್ಣ ಕಾಣಿಕೆಯಾಗಿ ಕಲ್ಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಪರಿಹಾರ ಧನ ವಿತರಣೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೊಂದರೆಗೊಳಗಾದ (ಮೊದಲ ಪುಟದಿಂದ) ಕುಟುಂಬಗಳೊಂದಿಗೆ ಸಮಾಲೋಚನೆ ಹಾಗೂ ಪರಿಹಾರ ಧನ ವಿತರಣಾ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯಿತು. ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದ ಅವರು ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.

ಅನುಕಂಪದಿಂದ ಪರಿಹಾರ ಅಸಾಧ್ಯ. ಅನುಪಾಲನೆ ಅತೀ ಮುಖ್ಯ. ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಪ್ರತಿಯೊಬ್ಬರೂ ದುಡಿಯಬೇಕು. ಇದರಿಂದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘಗಳನ್ನು ರಚಿಸುವ ಮೂಲಕ ಜೀವ ಮತ್ತು ಜೀವನದ ಭದ್ರತೆ ಕಲ್ಪಿಸಲು ಮುಂದಾಗಲಾಗಿದೆ. ಪ್ರತಿಯೊಬ್ಬರಲ್ಲೂ ಧೈರ್ಯ, ಉಳಿತಾಯ ಮನೋಭಾವ ಬಂದಿದೆ. ಹಣ ಸದ್ಬಳಕೆ ಮಾಡುವದು ಹೇಗೆ ಎಂಬ ಬಗ್ಗೆ ತಿಳುವಳಿಕೆ ಬಂದಿದೆ ಎಂದು ಅವರು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಸರ್ಕಾರದಿಂದ ಸಂತ್ರಸ್ತರಿಗಾಗಿ ಮನೆ ನಿರ್ಮಿಸುವ ಕಾರ್ಯ ನಡೆದಿದೆ. ಇದು ಮತ್ತಷ್ಟು ಚುರುಕು ಪಡೆಯಬೇಕು ಎಂದು ಇದೇ ಸಂದರ್ಭ ತಿಳಿಸಿದರು.

ಪ್ರಕೃತಿ ವಿಕೋಪ ಸಂಬಂಧಿಸಿ ದಂತೆ ನಾನಾ ರೀತಿಯ ವಿಶ್ಲೇಷಣೆಗಳು ನಡೆಯುತ್ತಿವೆ. ಹೋಂ ಸ್ಟೇ ಆರಂಭಿಸಿರುವದರಿಂದಲೇ ಪ್ರಕೃತಿ ವಿಕೋಪವಾಗಿದೆ ಎಂಬದನ್ನು ಬಿಂಭಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬದನ್ನು ಅವಲೋಕಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.

ಎರಡನೇ ಮೊಣ್ಣಂಗೇರಿ, ಕಾಲೂರು ಮತ್ತಿತರ ಕಡೆಗಳಲ್ಲಿ ಹೋಂ ಸ್ಟೇಗಳು ಇಲ್ಲ. ಪ್ರಕೃತಿ ವಿಕೋಪಕ್ಕೆ ನಿಜವಾದ ವೈಜ್ಞಾನಿಕ ಕಾರಣ ನೀಡಬೇಕಿದೆ. ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬಾರದು. ಕೊಡಗಿನ ಜನರ ಬದುಕಿನಲ್ಲಿ ಹೊಸ ಬೆಳಕು ಕಾಣುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ನುಡಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳಿಂದ ಇಲ್ಲಿನ ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಮದ್ಯವರ್ಜನ ಶಿಬಿರ ಏರ್ಪಡಿಸುವ ಮೂಲಕ ಹೊಸ ಬದುಕಿಗೆ ಅವಕಾಶ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದ್ದವು ಎಂದು ಅಪ್ಪಚ್ಚುರಂಜನ್ ಸ್ಮರಿಸಿದರು.

ಕೊಡಗಿನ ಪ್ರಾಕೃತಿಕ ವಿಕೋಪದ ಕ್ಷಣಗಳು, ಸರಕಾರ ಹಾಗೂ ದಾನಿಗಳ ಸಹಿತ ಸಂಘ ಸಂಸ್ಥೆಗಳ ಸಹಯೋಗವನ್ನು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ನೆನಪಿಸುತ್ತಾ; ಏಪ್ರಿಲ್‍ಗೆ ಮುಂಚಿತವಾಗಿ ಮನೆಗಳ ಪುನರ್ನಿರ್ಮಾಣಕ್ಕೆ ಸರಕಾರ ಕಾಳಜಿ ವಹಿಸಬೇಕೆಂದು ಒತ್ತಾಯಿಸಿದರು. ಶ್ರೀ ಕ್ಷೇತ್ರದ ಕೊಡಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಎರಡನೇ ಮೊಣ್ಣಂಗೇರಿ ಗ್ರಾಮದ ಧನಂಜಯ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಿದರು.

ವಿಧಾನ ಪರಿಷತ್ ಸzಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ, ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ್, ಐಡಿಬಿಐ ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಮಸ್ವಾಮಿ, ಧರ್ಮಸ್ಥಳ ಯೋಜನೆ ಅಧಿಕಾರಿ ಡಾ. ಮಂಜುನಾಥ ಸ್ವಾಗತಿಸಿದರು. ಪ್ರಮುಖರಾದ ಬಾನಂಗಡ ಅರುಣ್, ಮಹಾವೀರ ಅರ್ಜಿ, ಜಿ.ಪಂ. ಅಧಿಕಾರಿ ಜಿ. ಭೀಮಸೇನ್ ರಾವ್, ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ರಾಮಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಗಳಿಗೆ ಅಭಿನಂದನಾ ಪತ್ರದೊಂದಿಗೆ ಧರ್ಮಾಧಿಕಾರಿಗಳಿಗೆ ಸಂಘ ಸಂಸ್ಥೆಗಳು ಕೊಡಗಿನ ಪೇಟ, ಒಡಿಕತ್ತಿ ನೀಡಿ ಗೌರವಿಸಿದರು.

-ಚಿತ್ರ, ಸಹಕಾರ: ಚಂದ್ರಮೋಹನ್, ಲಕ್ಷ್ಮೀಶ್