ಮಡಿಕೇರಿ, ಜ. 10: ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರ ಕೋಟಾ ಹಾಗೂ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‍ಓ) ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನಗರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿ, ಶುಲ್ಕ ಹೆಚ್ಚಳದ ಪ್ರಸ್ತಾಪದ ವಿರುದ್ಧ ಘೋಷಣೆ ಕೂಗಿದರು.

ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚಿಗೆ ಸದನದಲ್ಲಿ ಮಾಡಿರುವದನ್ನು ವಿರೋಧಿಸಿ, ಮತ್ತು ಆ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಎಐಡಿಎಸ್‍ಓದ ರಾಜ್ಯ ಸಮಿತಿ ಸದಸ್ಯ ಅಜಯ್ ಕಾಮತ್, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ (ಅನಿವಾಸಿ ಭಾರತೀಯರ ಕೋಟಾ) ಜಾರಿಗೆ ತರುವ ಪ್ರಸ್ತಾಪವನ್ನು ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚಿಗೆ ಸದನದಲ್ಲಿ ಮಾಡಿದ್ದಾರೆ. ಸರಕಾರ ಈ ನಿಲುವು ನಿಜಕ್ಕೂ ವೈದ್ಯರಲ್ಲಿ, ವಿದ್ಯಾರ್ಥಿ, ಪೋಷಕರು ಹಾಗೂ ಜನಸಾಮಾನ್ಯರಲ್ಲೂ ದೊಡ್ಡ ಆಘಾತ ಮೂಡಿಸಿದೆ ಎಂದರು.

ರಾಜ್ಯ ಸರಕಾರ, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10ರಷ್ಟು ಎನ್.ಆರ್.ಐ ಕೋಟಾವನ್ನು ಜಾರಿಗೆ ತರುವ ಮತ್ತು ವೈದ್ಯಕೀಯ ಪದವಿ ಹಾಗೂ ಸ್ನಾತ್ತಕೋತ್ತರ ಕೋರ್ಸುಗಳ ಶುಲ್ಕವನ್ನು ಶೇ.300-600 ರ ಪ್ರಮಾಣದಲ್ಲಿ ಹೆಚ್ಚಿಸುವ ಕುರಿತು ರಾಜ್ಯ ಸರಕಾರ ಪ್ರಸ್ತಾಪ ಮಾಡಿದೆ. ಹಾಗೆಯೇ ಪದವಿ ಕೋರ್ಸುಗಳ ಶುಲ್ಕವನ್ನು 17,000 ರೂ ರಿಂದ 50,000ಕ್ಕೆ ಈಗಾಗಲೆ ಏರಿಸಲಾಗಿದೆ. ಸ್ನಾತ್ತಕೋತ್ತರ ಕೋರ್ಸುಗಳ ಶುಲ್ಕಗಳನ್ನು 40,000 ರೂ. ರಿಂದ 3.5 ರೂ. ಲಕ್ಷಕ್ಕೆ ಏರಿಸುವ ಪ್ರಸ್ತಾಪ ಮಾಡಿದೆ. ಈ ಮೂಲಕ ರಾಜ್ಯ ಸರಕಾರ ಇನ್ನೊಂದು ಆಘಾತವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಿದೆ ಎಂದರು.

ಬೆಲೆ ಏರಿಕೆ, ಬರ ಮುಂತಾದ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿರುವಾಗ, ಶುಲ್ಕಗಳನ್ನು ಕಡಿಮೆ ಮಾಡುವ ಬದಲು, 5-6 ಪಟ್ಟು ಹೆಚ್ಚಿಸಿರುವದು ಅತ್ಯಂತ ನೋವಿನ ವಿಚಾರ ಎಂದು ಅಜಯ್ ಅಸಮಾಧಾನ ವ್ಯಕ್ತ ಪಡಿಸಿದರು.

ಎನ್.ಆರ್.ಐ ಕೋಟಾವನ್ನು ಜಾರಿಗೆ ತರುವ ಹಾಗೂ ವೈದ್ಯಕೀಯ-ಸ್ನಾತ್ತಕೋತ್ತರ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂದು, ಹೆಚ್ಚಿಸಿರುವ ವೈದ್ಯಕೀಯ ಪದವಿ ಶುಲ್ಕವನ್ನು ಹಿಂಪಡೆಯಬೇಕೆಂದು ಅಜಯ್ ಒತ್ತಾಯಿಸಿದರು.

ವೈದ್ಯಕೀಯ ವಿದ್ಯಾರ್ಥಿ ಮಲ್ಲಿಕಾರ್ಜುನ ಮಾತನಾಡಿ, ಇಂದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ವೈದ್ಯಕೀಯ ಕ್ಷೇತ್ರದತ್ತ ಬರಲು ಹಿಂದೇಟು ಹಾಕುವ ಸ್ಥಿತಿಯನ್ನು ಸರಕಾರ ನಿರ್ಮಿಸುತ್ತಿದೆ. ಸರಕಾರದ ನೀತಿಯಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ. ವರ್ಷದಿಂದ ವರ್ಷಕ್ಕೆ ಶುಲ್ಕ ಏರಿದರೆ ವಿದ್ಯಾರ್ಥಿಗಳ ಸ್ಥಿತಿ ಗೊಂದಲಮಯವಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್‍ನ ಮೈಸೂರಿನ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ರಾಮಕೃಷ್ಣ, ಶಾಹಿದ್ ಮತ್ತಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.