ಮಡಿಕೇರಿ, ಜ. 10: ಇಂದು ನಗರದ ಗಾಂಧಿ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಸಂಸ್ಥೆಯಿಂದ ಏರ್ಪಟ್ಟಿದ್ದ ಸಂತ್ರಸ್ತರಿಗೆ ಸಾಂತ್ವನ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಭಾವನಾತ್ಮಕವಾಗಿ ನುಡಿದ ಕೆಲವು ಮಾತುಗಳು ಈ ಕೆಳಗಿನಂತಿವೆ.

* ಕಷ್ಟ ಬಂದಾಗ ನಮಗಿಂತ ಕಷ್ಟದಲ್ಲಿರುವವರನ್ನು ಸ್ಮರಿಸಬೇಕು; ದೇವರಲ್ಲಿ ಕಷ್ಟ ಪರಿಹಾರ ಮಾಡು ಎಂದು ಕೇಳಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವದಿಲ್ಲ; ಅಂತಹ ಸಮಸ್ಯೆಯನ್ನು ಎದುರಿಸಲು ದೃಢತೆಯ ಮುನ್ನಡಿ ಇಡಬೇಕು.

* ದೇವಾಲಯ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥಿಸುವಾಗ ನಮ್ಮ ಸಮಸ್ಯೆ ಬಗೆಹರಿಯಬಹುದೇ ಎನ್ನುವ ಕುರಿತು ಸಂಶಯದ ಪ್ರಶ್ನೆ ಮುಂದಿಟ್ಟರೆ ಸಮಸ್ಯೆ ಬಗೆ ಹರಿಯುವದಿಲ್ಲ; ಬಗೆ ಹರಿಸು ಎಂದು ಪ್ರಾರ್ಥಿಸಿದರೆ ದೇವರ ಆಶೀರ್ವಾದ ಲಭ್ಯವಾಗುತ್ತದೆ. ಜೊತೆಗೆ ಆ ಸಮಸ್ಯೆಯನ್ನು ಎದುರಿಸುವ ಪ್ರಯತ್ನವೂ ನಡೆಯಬೇಕಿದೆ.

* ಕಲ್ಕತ್ತಾದಲ್ಲಿ ಈ ಹಿಂದೆ ಘಟನೆಯೊಂದು ನಡೆದಿತ್ತು. ಓರ್ವ ವ್ಯಕ್ತಿ ತಾನು ಕಾಳಿಕಾದೇವಿ ಮತ್ತು ದುರ್ಗಾದೇವಿಯ ಪೂಜೆ ಮಾಡಿ; ತನಗೆ ದೇವಿ ಒಲಿದಿದ್ದಾಳೆ ಎಂದು ನಂಬಿದ್ದ ಇದೇ ನಂಬುಗೆಯಲ್ಲಿ ಮೃಗಾಲಯವೊಂದಕ್ಕೆ ತೆರಳಿ; ಹುಲಿಯ ವಾಸದ ಕಂದಕಕ್ಕೆ ಹಾರಿದ; ದೇವಿಯ ವಾಹನ ಹುಲಿ ತನಗೆ ಏನೂ ಮಾಡುವದಿಲ್ಲ ಎನ್ನುವ ವಿಶ್ವಾಸ ಹೊಂದಿದ್ದ ಆತನ ಗುರುತೂ ಸಿಗದಂತೆ ಹುಲಿ ತಿಂದು ಹಾಕಿತು. ಅಕಸ್ಮಾತ್ ಆತ ಗಣಪತಿಯ ವಾಹನ ಇಲಿಯ ಬಳಿ ಬಿದ್ದಿದ್ದರೂ ಜೀವಂತ ಉಳಿಯುತ್ತಿದ್ದ. ದೇವರನ್ನು ಪರೀಕ್ಷಿಸಲು ಹೋಗಬಾರದು ಎನ್ನುವದಕ್ಕೆ ಇದು ಸ್ಪಷ್ಟ ಉದಾಹರಣೆ. ದೇವರಲ್ಲಿ ಶ್ರದ್ಧೆ, ಭಕ್ತಿ, ದೃಢತೆಯ ಮೂಲಕ ಆತ್ಮವಿಶ್ವಾಸ ಹೊಂದಬೇಕು.

* 1948-49ರಲ್ಲಿ ಜಪಾನ್‍ನ ಹಿರೋಶಿಮಾ, ನಾಗಸಾಕಿಯಲ್ಲಿ ವಿಶ್ವ ಸಮರ ಸಂದರ್ಭ ಬಾಂಬ್ ಧಾಳಿಯಿಂದ ಆರು ಲಕ್ಷ ಮಂದಿ ಸಾವಿಗೀಡಾದರು . ಆದರೆ ಜಪಾನ್‍ನ ನಿವಾಸಿಗಳು ನಿರಂತರ ಪ್ರಯತ್ನದಿಂದ ಆ ದೇಶವನ್ನು ಮರು ನಿರ್ಮಾಣಗೊಳಿಸಿ ಪ್ರಭಲವಾಗಿ ಬೆಳೆಸಿದರು. ಅದೇ ರೀತಿ ಕೊಡಗಿನ ಜನರು ಕೂಡ ಪ್ರಕೃತಿ ವಿಕೋಪದ ಸಂಕಷ್ಟದಿಂದ ಪ್ರಯತ್ನ ಪೂರ್ವಕವಾಗಿ ಸುಸ್ಥಿತಿಯತ್ತ ಸಾಗಬೇಕಿದೆ.

ಇದಕ್ಕೆ ಒಂದೆಡೆ ಭಗವಂತ, ಮತ್ತೊಂದೆಡೆ ಸರಕಾರ ಸ್ಪಂದಿಸಬೇಕಿದೆ.