ಮಡಿಕೇರಿ, ಜ. 10: ಧರ್ಮ ವಿರೋಧಿ, ಪ್ರವಾದಿ ನಿಂದನೆಗಳಿಗೆ ಕಡಿವಾಣ ಹಾಕುವ ಸಂಬಂಧ ಸೂಕ್ತ ಕಾನೂನು ರಚನೆಯಾಗಬೇಕು ಎಂದು ಆಗ್ರಹಿಸಿ ಮಡಿಕೇರಿಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ನಗರದ ಇಂದಿರಾಗಾಂಧಿ ವೃತ್ತ ದಿಂದ ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ಸಾಗಿದ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪತ್ರಕರ್ತ ಸಂತೋಷ್ ತಮ್ಮಯ್ಯ ಹಾಗೂ ಅಜಿತ್ ಹನುಮಕ್ಕನವರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಶರಿಯತ್ ಕಾನೂನಿನ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲ್ವಿ ಮಾತನಾಡಿ, ಸಮಾನತೆಯ ಸಮಾಜವನ್ನು ಕಟ್ಟಿಕೊಟ್ಟವರು ಪ್ರವಾದಿಗಳು. ಇವರಿಗೆ ಕೋಟ್ಯಾಂತರ ಜನ ಅನುಯಾಯಿ ಗಳಿದ್ದಾರೆ. ಇವರ ನಂಬಿಕೆ, ಭಕ್ತಿಗೆ ಅವಹೇಳನಕಾರಿ ಹೇಳಿಕೆಗಳು ನೋವು ತಂದಿದೆ ಎಂದು ಹೇಳಿದರು.

ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಪ್ರವಾದಿ ಅನುಯಾಯಿಗಳಿಗೆ ನೋವು ಮಾಡಿದ್ದಾರೆ. ಪ್ರವಾದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೊಡಗು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗೌರವಾಧ್ಯಕ್ಷ ಇಬ್ರಾಹಿಂ ಮಾಸ್ಟರ್, ಸಂಘಟನೆಯ ಪದಾಧಿಕಾರಿ ಗಳಾದ ಯೂಸೂಫ್ ಹಾಜಿ, ನಜೀರ್ ಹಾಜಿ, ಮುಕ್ತಾರ್ ಹಾಜಿ, ಕರೀಮ್, ಹಾರೂನ್ ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಖಾಸಿಂ ಮತ್ತಿತರ ಪ್ರಮುಖರು ಪಾಲ್ಗೊಂಡರು.