ಚೆಟ್ಟಳ್ಳಿ, ಜ. 10: ಸೆಡ್ ವೈಸಿ ಕೊಟ್ಟಮುಡಿ ಇವರ ವತಿಯಿಂದ ನಡೆದ ಏಕದಿನದ ವಾಲಿಬಾಲ್ ಪಂದ್ಯಾಟದಲ್ಲಿ ಜಿಲ್ಲೆಯ ಪ್ರತಿಷ್ಠಿತ ತಂಡವಾದ ಸ್ಟಾರ್ ಬಾಯ್ಸ್ ತಂಡವು ಕೂಡಿಗೆ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೆ ಸೆಮಿಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವು 15-10 ಹಾಗೂ 15-09 ಎರಡು ನೇರ ಸೆಟ್ಗಳಿಂದ ವಿಜಯಿಸಿ ಫೈನಲ್ ಪ್ರವೇಶಿಸಿದರು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೂಡಿಗೆ ತಂಡವು ಆತಿಥೇಯ ಸೆಡ್ ವೈಸಿ ತಂಡವನ್ನು 15-11 ಹಾಗೂ 15-14 ನೇರ ಎರಡು ಸೆಟ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದರು.
ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡವು 25-20 ಅಂಕಗಳಿಂದ ಕೂಡಿಗೆ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಿತು.
ಪಂದ್ಯಾಟದ ಆಲ್ ರೌಂಡರ್ ಪ್ರಶಸ್ತಿಯನ್ನು ಸ್ಟಾರ್ ಬಾಯ್ಸ್ ತಂಡದ ಶಿಯಾಬ್ ಹಾಗೂ ಅತ್ಯುತ್ತಮ ಪಾಸರ್ ಪ್ರಶಸ್ತಿಯನ್ನು ಅದೇ ತಂಡದ ನಸೀರ್ ಪಡೆದುಕೊಂಡರು. ಈ ಸಂದರ್ಭ ಸುಹೈಲ್, ಗಫೂರ್ ಮತ್ತಿತರರು ಇದ್ದರು.