ಸುಂಟಿಕೊಪ್ಪ, ಜ. 10: ಆಟೋ ರಿಕ್ಷಾ, ದ್ವಿಚಕ್ರ ಹಾಗೂ ಇನ್ನಿತರೆ ವಾಹನಗಳ ದಟ್ಟಣೆಯಿಂದ ಕಿಷ್ಕಿಂದೆಯಂತಾಗಿದ್ದ ಉಲುಗುಲಿ ರಸ್ತೆಯಲ್ಲಿ ಆಟೋ ರಿಕ್ಷಾಗಳ ಹಾಗೂ ದ್ವಿಚಕ್ರ ವಾಹನಗಳ ಸಮರ್ಪಕ ನಿಲುಗಡೆಗೆ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸ್ಥಳ ಗುರುತಿಸಲಾಯಿತು.
ಉಲುಗುಲಿ ರಸ್ತೆಯಲ್ಲಿ ಸದಾ ಕಾಲ ವಾಹನಗಳ ಮತ್ತು ಪಾದಚಾರಿಗಳ ಸಂಚಾರ ಅಧಿಕಗೊಳ್ಳುತ್ತಿದ್ದು, ಸೂಕ್ತವಾದ ಸ್ಥಳವಕಾಶದ ಕೊರತೆಯಿಂದಾಗಿ ಆಟೋ ರಿಕ್ಷಾಗಳು ಮತ್ತು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲುಗಡೆಗೊಳ್ಳುತ್ತಿದ್ದರಿಂದ ಇತರ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ತಿರುಗಾಟಕ್ಕೆ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಪುಕಾರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯಿಂದ ಉಲುಗುಲಿ ರಸ್ತೆಯ ಪ್ರವೇಶದ್ವಾರದಿಂದ ಮಾರುಕಟ್ಟೆ ಸಮೀಪದ ಬೋರ್‍ವೆಲ್‍ವರೆಗೆ ಆಟೋ ರಿಕ್ಷಾಗಳ ನಿಲುಗಡೆಗೆ ಸ್ಥಳ ಗುರುತಿಸಿ ಬಿಳಿ ಬಣ್ಣದ ಪೈಯಿಂಟ್‍ನಿಂದ ಮಾರ್ಕ್ ಮಾಡಲಾಗಿದೆ.
ಆಟೋ ರಿಕ್ಷಾಗಳು ಗುರುತಿಸಲ್ಪಟ್ಟಿರುವ ಮಾರ್ಕ್‍ನ ಒಳಗೆ ನಿಲುಗಡೆಗೊಳ್ಳುವದರಿಂದ ಇನ್ನಿತರ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೋಸ್ ಮೇರಿ ರಾಡ್ರಿಗಸ್, ಸದಸ್ಯರಾದ ಎ. ಶ್ರೀಧರ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಬಿ.ಜೆ. ಮೇದಪ್ಪ, ಎ.ಎಸ್.ಐ. ಪಾರ್ಥ ಹಾಗೂ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹಾಜರಿದ್ದರು. ಪಂಚಾಯಿತಿಯ ಸ್ವಚ್ಛತಾ ಹಾಗೂ ಇತರೆ ನೌಕರರು ಈ ಕಾರ್ಯಾಚರಣೆಯಲ್ಲಿ ತೊಡಗಿಕೊಂಡು ರಸ್ತೆಗೆ ಮಾರ್ಕ್ ಬಳಿದರು.