ಕುಶಾಲನಗರ, ಜ. 9: ಪರಿಸರ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ದಿಸೆಯಲ್ಲಿ ಯುವಜನತೆ ಹೆಚ್ಚಿನ ಕಾಳಜಿ ವಹಿಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎನ್.ಎಸ್.ಎಸ್. ವಾರ್ಷಿಕ ಯೋಜನಾ ಶಿಬಿರದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ ಕುರಿತು ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬರೂ ನೆಲ, ಜಲ ಹಾಗೂ ಜೀವಿ ವೈವಿಧ್ಯ ಸಂರಕ್ಷಣೆಗೆ ತೊಡಗಬೇಕಾಗಿದೆ ಎಂದರು.

ಮನುಷ್ಯನ ದಿನನಿತ್ಯದ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರುವ ಪ್ಲಾಸ್ಟಿಕ್, ಪರಿಸರದ ಮೇಲೆ ಮಾಡುತ್ತಿರುವ ಅಪಾಯ ಮೇರೆ ಮೀರಿದೆ. ಪ್ಲಾಸ್ಟಿಕ್ ಸುಟ್ಟಾಗ ಪರಿಸರಕ್ಕೆ ಹಾನಿಯಾಗುವಂತಹ ಕ್ಯಾನ್ಸರ್‍ಗೆ ಕಾರಣವಾಗಿರುವ ಅನಿಲಗಳು ಬಿಡುಗಡೆಯಾಗಿ ಮಲಿನಗೊಂಡು ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಈ ದಿಸೆಯಲ್ಲಿ ನಾವು ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ - ಪರಿಸರ ಉಳಿಸಿ’ ಪರಿಸರ ಜಾಗೃತಿ ಆಂದೋಲನದ ಮೂಲಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್ ಮಾತನಾಡಿ, ನಾವು ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಓಝೋನ್ ಪದರ ರಕ್ಷಿಸುವ ಮೂಲಕ ಭೂಮಿಯನ್ನು ಸಂರಕ್ಷಿಸಬೇಕಿದೆ ಎಂದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಎನ್.ಎಸ್.ಎಸ್. ಶಿಬಿರದಲ್ಲಿ ಶಿಬಿರಾರ್ಥಿಗಳು ಕೈಗೊಂಡಿರುವ ಶ್ರಮದಾನ ಹಾಗೂ ಸೇವಾ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹೆಚ್.ಆರ್. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾಳಿಕಾಂಭ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಎ. ಡಂಕಣಾಚಾರಿ, ಉಪನ್ಯಾಸಕ ಸಿ. ಪುಟ್ಟರಾಜು, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಟಿ.ಎಂ. ಸುಧಾಕರ್, ಕೆ.ಆರ್. ವಂದನಾ, ಇದ್ದರು.