ಚೆಟ್ಟಳ್ಳಿ, ಜ. 9: ಇಲ್ಲಿನ ಚೆಟ್ಟಳ್ಳಿ ಪ್ರೌಢ ಶಾಲೆಯ ಹತ್ತನೇ ತರಗತಿ ಹಳೇ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ನಿವೃತ್ತ ಶಿಕ್ಷಕರಾದ ವೈರಮುಡಿ ಅವರು ಚೆಟ್ಟಳ್ಳಿ ಪ್ರೌಢ ಶಾಲೆಗೆ 60 ವರ್ಷಗಳ ಇತಿಹಾಸವಿದೆ. ಹಲವು ವಿದ್ಯಾರ್ಥಿಗಳು ಈ ಶಾಲೆಯಿಂದ ಶಿಕ್ಷಣ ಪಡೆದು ಇಂದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಡೆದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಲು ಈ ವೇದಿಕೆ ಪ್ರಯೋಜನಕಾರಿಯಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮದ ಆಯೋಜಕರಲ್ಲಿ ಪ್ರಮುಖರಾದ ಸುಹೈಲ್ ನಮ್ಮ ವಿದ್ಯಾರ್ಥಿ ಜೀವನ ಮರಳಿ ಪಡೆಯಲು ಸಾಧ್ಯವಿಲ್ಲ, ಅದು ಸದಾ ಸ್ಮರಣೀಯ ಎಂದರು.

ಲಕ್ಕಿ ಆಫ್ ದಿ ಡೇ ಗಾಗಿ ಏರ್ಪಡಿಸಿದ್ದ ಲಕ್ಕಿ ಡ್ರಾ ಪ್ರಥಮ ಸ್ಥಾನವನ್ನು ರಮ್ಯ ಹಾಗೂ ದ್ವಿತೀಯ ಸ್ಥಾನವನ್ನು ಪ್ರೀತಿ ಪಡೆದುಕೊಂಡರು. ಮಹಿಳೆಯರ ಆಟೋಟದಲ್ಲಿ ವೈಶಾಲಿ ಪ್ರಥಮ ಹಾಗೂ ಅಸ್ಮಾ ದ್ವಿತೀಯ ಸ್ಥಾನ ಪಡೆದರು. ಉಮರುಲ್ ಫಾರೂಖ್, ಕವಿತಾ ನಿರೂಪಿಸಿ ನೌಫಲ್ ಸ್ವಾಗತಿಸಿ, ಸುಪರ್ಣ ವಂದಿಸಿದರು.

ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಬೋಜಪ್ಪ, ಶಾಲಾ ಮುಖ್ಯೋಪಾಧ್ಯಾಯರಾದ ತಿಲಕ, ನಿವೃತ್ತ ದೈಹಿಕ ಶಿಕ್ಷಕರಾದ ಮಾಚಯ್ಯ, ಶಿಕ್ಷಕರಾದ ಸುನಂದ, ಸತ್ಯನಾರಾಯಣ, ನೂತನ, ವಿದ್ಯಾರ್ಥಿಗಳಾದ ರಶೀದ್, ಅನಿಲ್, ಸುನಿಲ್ ರಶೀದ, ಮತ್ತಿತರರು ಇದ್ದರು.