ಕುಶಾಲನಗರ, ಜ. 9: ಕುಶಾಲನಗರದಲ್ಲಿ ಮಹಿಳೆಯರಿಗಾಗಿ 7 ದಿನಗಳ ಅವಧಿಯ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾ ಪೊಲೀಸ್, ಕುಶಾಲನಗರ ವಾಸವಿ ಯುವತಿಯರ ಸಂಘ, ರೋಟರಿ ಇನ್ನರ್ ವೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಬಿರಕ್ಕೆ ಸ್ಥಳೀಯ ರೋಟರಿ ಸಭಾಂಗಣದಲ್ಲಿ ಪೊಲೀಸ್ ಉಪ ಅಧೀಕ್ಷಕ ಪಿ.ಕೆ.ಮುರಳೀಧರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ವಯಂ ರಕ್ಷಣೆಗಾಗಿ ಆಯುಧಗಳನ್ನು ಹೊಂದುವವರು ಅಗತ್ಯವಾಗಿ ಅವುಗಳ ಬಳಕೆ ಮತ್ತು ನಿರ್ವಹಣೆ ಬಗ್ಗೆ ಅರಿವು ಹೊಂದುವದು ಅಗತ್ಯವಾಗಿದೆ. ಕೇವಲ ತೋರ್ಪಡಿಕೆಗಾಗಿ ಆಯುಧಗಳನ್ನು ಹೊಂದದೆ ತಮ್ಮ ರಕ್ಷಣೆ ಉದ್ದೇಶಕ್ಕೆ ಮಾತ್ರ ಬಳಸುವದು ನಿಯಮವಾಗಿದ್ದು ಮನೆಯಲ್ಲಿ ಅಪಾಯಕಾರಿ ಆಯುಧಗಳನ್ನು ಮಕ್ಕಳಿಂದ ದೂರವಿಡುವಂತೆ ಅವರು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಕ್ಯಾತೆಗೌಡ ಮಾತನಾಡಿ, ರಕ್ಷಣೆಯ ಉದ್ದೇಶಕ್ಕಾಗಿ ಹೊಂದುವ ಆಯುಧಗಳನ್ನು ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಆಯುಧಗಳ ದುರುಪಯೋಗ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಜಿಲ್ಲಾ ಸಶಸ್ತ್ರ ಪಡೆ ಅಧಿಕಾರಿ ತಿಮ್ಮಪ್ಪಗೌಡ ಮಾತನಾಡಿ, ಬಂದೂಕುಗಳ ಅಸಮರ್ಪಕ ನಿರ್ವಹಣೆ, ತರಬೇತಿ ಕೊರತೆಯಿಂದ ಕೆಲವೊಮ್ಮ ಅವಘಡಗಳು ಸಂಭವಿಸುತ್ತವೆ. ದೇಶ ಸೇವೆ, ರಕ್ಷಣೆಯಲ್ಲಿ ನಾಗರಿಕರ ಪಾತ್ರದ ಅಗತ್ಯತೆ ಬಂದಾಗ ಇಂತಹ ತರಬೇತಿಗಳು ಉಪಯೋಗವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಠಾಣೆ ಅಧಿಕಾರಿ ಜಗದೀಶ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ, ಜಿಲ್ಲಾ ಸಶಸ್ತ್ರ ಪಡೆ ತರಬೇತುದಾರರಾದ ವೆಂಕಪ್ಪ, ರವಿ, ವಾಸವಿ ಯುವತಿ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮಿ ರವಿಚಂದ್ರ, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್ ಇದ್ದರು. ದಿವ್ಯ ಸುಜಯ್ ಮತ್ತು ಶಾಲಿನಿ ನರೇಂದ್ರ ಪ್ರಾರ್ಥಿಸಿದರು, ಸುನಿತ ಮಹೇಶ್ ಸ್ವಾಗತಿಸಿದರು, ಶ್ರೀಲಕ್ಷ್ಮಿ ವಂದಿಸಿದರು.