ಕೂಡಿಗೆ, ಜ. 9 : ಕಳೆದ ಐದು ತಿಂಗಳ ಹಿಂದೆ ಪ್ರಕೃತಿ ವಿಕೋಪದಿಂದ ನೊಂದ ನೆರೆಸಂತ್ರಸ್ತರಿಗೆ ಇನ್ನೂ ಕೂಡಾ ಪರಿಹಾರ ದೊರಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಕೂಡಿಗೆ ಮತ್ತು ಕೂಡಮಂಗಳೂರು ವ್ಯಾಪ್ತಿಯ ಕಾವೇರಿ ಮತ್ತು ಹಾರಂಗಿ ನದಿಗಳ ನೀರು ಹೆಚ್ಚುವರಿಯಾಗಿ ಪ್ರವಾಹ ಸೃಷ್ಟಿಯಾದ ವೇಳೆ ಈ ವ್ಯಾಪ್ತಿಯ ಐವತ್ತಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿದ್ದವು. ಹಾನಿಗೊಳಗಾದ ಮನೆಗಳನ್ನು ಶುಚಿತ್ವಕ್ಕಾಗಿ ಕಂದಾಯ ಇಲಾಖೆ 3800 ರೂ. ಗಳ ಚೆಕ್ಕನ್ನು ಪ್ರಾರಂಭದಲ್ಲಿ ನೀಡಿತ್ತು, ಹಾನಿಗೊಳಗಾದ ಮನೆಗಳನ್ನು ಸರಿಪಡಿಸಲು ಸರ್ಕಾರದಿಂದ 50 ಸಾವಿರ ರೂ. ಪರಿಹಾರ ನೀಡುವದಾಗಿ ಘೊಷಣೆ ಮಾಡಿದ್ದು, ಈವೆರೆಗೆ ಯಾವದೇ ಹಣ ದೊರಕಿರುವದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಪರಿಹಾರಕ್ಕಾಗಿ ದಿನೇ ದಿನೇ ಆಯಾ ವ್ಯಾಪ್ತಿಯ ಗ್ರಾ.ಪಂ.ಗೆ ಭೇಟಿ ನೀಡಿ ನಿರಾಸೆಯಿಂದ ಹಿಂತಿರುಗುತ್ತಿದ್ದ ದೃಶ್ಯ ಕಂಡುಬರುತ್ತಿದೆ. ಕುಶಾಲನಗರ ಪ.ಪಂ. ವ್ಯಾಪ್ತಿಯ ಸಾಯಿ ಬಡಾವಣೆ ಹಾಗೂ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಕುವೆಂಪು ಬಡಾವಣೆ ಸಂತ್ರಸ್ತರಿಗೆ ಪರಿಹಾರ ಧನವನ್ನು ನೀಡಲಾಗಿದೆ.ಆದರೆ ಕೂಡಿಗೆ ಹಾಗೂ ಕೂಡಮಂಗಳೂರು ಗ್ರಾ.ಪಂ ವ್ಯಾಪ್ತಿಯ ನೆರೆಸಂತ್ರಸ್ತರು ಅಧಿಕ ಸಂಖ್ಯೆಯಲ್ಲಿ ಕಡುಬಡವರಾಗಿದ್ದು, ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿನ ಸಂತ್ರಸ್ತರಿಗೆ ಯಾವದೇ ಪರಿಹಾರ ದೊರೆತಿರುವದಿಲ್ಲ ಎಂದು ನೊಂದ ಕುಟುಂಬಗಳು ಆರೋಪಿಸಿವೆ.

ಸಂತ್ರಸ್ತರು ಗ್ರಾ.ಪಂ.ಗೆ ಭೇಟಿ ನೀಡಿದ ಸಂದರ್ಭ, ಪರಿಹಾರದ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ ಎಂಬ ಉತ್ತರ ಮಾತ್ರ ಆಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.