* ಸಿದ್ದಾಪುರ, ಜ. 9: ಕಂದಾಯ ಇಲಾಖೆಯಿಂದ ಕೃಷಿ ಗದ್ದೆ ಸರ್ವೇ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ರೈತರಲ್ಲಿ ಆತಂಕ ಬೇಡ ಎಂದು ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು.

ಪಾಲಿಬೆಟ್ಟದ ಮಹಿಳಾ ಸಮಾಜ ಕಟ್ಟಡದಲ್ಲಿ ಕೊಡಗು ಜಿಲ್ಲಾ ಪಂಚಾಯತ್, ವೀರಾಜಪೇಟೆ ತಾಲೂಕು ಕೃಷಿ ಇಲಾಖೆ ಸಹಯೋಗದಲ್ಲಿ ಅಮ್ಮತ್ತಿ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರ್ವೇ ನಡೆಸಿ ಭತ್ತ ಬೆಳೆಯದ ಅಥವಾ ಕೃಷಿ ಮಾಡದೇ ಇರುವ ಗದ್ದೆಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಇದರಿಂದ ಕೆಲವು ರೈತರು ಕೃಷಿ ನಷ್ಟವಾಗಿದೆ ಎಂದು ಇಲಾಖೆಗಳಿಗೆ ಪರಿಹಾರಕ್ಕಾಗಿ ಅರ್ಜಿ ಹಾಕುತ್ತಿದ್ದಾರೆ. ರೈತರಲ್ಲಿ ಯಾವದೇ ಆತಂಕ ಬೇಡ ಎಂದು ಹೇಳಿದರು.

ಕೊಡಗಿನ ರೈತರ ಮೇಲೆ ಸರ್ಕಾರ ಹೊಂದಿರುವ ನಿರ್ಲಕ್ಷ್ಯವೇ ಇಂದು ರೈತರು ಭತ್ತದ ಕೃಷಿಯಿಂದ ವಿಮುಕ್ತಗೊಳ್ಳಲು ಕಾರಣ ಎಂದು ಹೇಳಿದ ಅವರು ಕೊಡಗಿನಲ್ಲಿ ಭತ್ತದ ಕೃಷಿ ಕುಂಟಿತಗೊಂಡಿದೆ. ಈ ಹಿಂದೆ ರೈತರಿಂದ ಭತ್ತ ಖರೀದಿ ಮಾಡುವ ಕೇಂದ್ರವನ್ನು ಸ್ಥಾಪನೆ ಮಾಡುವದಾಗಿ ಸರ್ಕಾರ ಹೇಳಿತ್ತು. ನಂತರ ನಿಗಧಿತ ಬಂಡವಾಳ ಹೂಡುವವರಿಗೆ ಭತ್ತ ಖರೀದಿ ಕೇಂದ್ರ ಸ್ಥಾಪಿಸಲು ಅವಕಾಶ ಕಲ್ಪಿಸುವದಾಗಿ ಹೇಳಿ ಸರ್ಕಾರ ಮಾತು ಬದಲಿಸಿದೆ ಎಂದು ಹೇಳಿದ ಅವರು ದೊಡ್ಡ ಮೊತ್ತದ ಬಂಡವಾಳ ನೀಡಿ ಖರೀದಿ ಕೇಂದ್ರ ಸ್ಥಾಪಿಸುವಂತಹ ಮಿಲ್‍ಗಳು ಕೊಡಗಿನಲ್ಲಿ ಇಲ್ಲ ಎಂದರು. ಕೃಷಿ ವ್ಯವಸ್ಥೆ ಆಧುನೀಕರಣಗೊಂಡಿದೆ. ಬಿತ್ತನೆಯಿಂದ ಕಟಾವಿನ ವರೆಗೂ ಯಾಂತ್ರೀಕೃತಗೊಂಡಿದೆ. ಇಷ್ಟಿದ್ದರೂ ಇಳುವರಿ ಮಾತ್ರ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ರೈತರ ಬೆಳೆಗೆ ಸೂಕ್ತ ಬೆಲೆಯೂ ಇಲ್ಲ ಸರ್ಕಾರದಿಂದ ಬೆಂಬಲ ಬೆಲೆಯೂ ಇಲ್ಲ. ಬೆಳೆಗಾರರು, ರೈತರು ಕಾಡು ಪ್ರಾಣಿಗಳ ಆತಂಕದ ನಡುವೆ ಮತ್ತು ಗಗನಕ್ಕೇರಿರುವ ಕೃಷಿ ಪರಿಕರಗಳ ಬೆಲೆಗಳ ನಡುವೆ ಹೇಗೆ ಸ್ವಾವಲಂಭಿಗಳಾಗುವದು ಎಂದು ತಾಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನೆಯ ವಿಜ್ಞಾನಿ ವೆಂಕಟರಮಣಪ್ಪ, ಗೋಣಿಕೊಪ್ಪಲು ವಿಜ್ಞಾನಿ ಪ್ರಭಾಕರ್ ಪರ್ಯಾಯವಾಗಿ ವಿವಿಧ ಹಣ್ಣುಗಳ ಬೆಳವಣಿಗೆ, ನಿರ್ವಹಣೆ ಮತ್ತು ಮಣ್ಣಿನ ಪರೀಕ್ಷೆ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು.

ಪಾಲಿಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಅಜಿತ್ ಕರುಂಬಯ್ಯ ಕೃಷಿ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿದರು. ಕೃಷಿ ಅಧಿಕಾರಿ ಲವಿನ್ ಉಪಸ್ಥಿತರಿದ್ದರು. ಪಾಲಿಬೆಟ್ಟ ಮತ್ತು ಮೇಕೂರು ಸುತ್ತಮುತ್ತಲಿನ ಬೆಳೆಗಾರರು, ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.