ಮಡಿಕೇರಿ, ಜ. 9: ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಚೌಕಿಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಮಿಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ನಗರದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಪಿ. ರಮೇಶ್ ಮಾತನಾಡಿ, ಕೇಂದ್ರ ಸರ್ಕಾರವು ತಮಗೆ ಬೇಕಾದ ರೀತಿಯಲ್ಲಿ ನೀತಿ ರೂಪಿಸುತ್ತಾ (ಮೊದಲ ಪುಟದಿಂದ) ಕಾರ್ಮಿಕರನ್ನು ಕಡೆಗಣಿಸಿದೆ. ಕಾರ್ಮಿಕ ನೀತಿಗಳ ತಿದ್ದುಪಡಿಯಿಂದ ಉದ್ಯಮಿ ಗಳಿಗೆ ಅನುಕೂಲ ವಾಗಿದೆಯೇ ಹೊರತು ಕಾರ್ಮಿಕರಿಗಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನಿರುದ್ಯೋಗಿ ಗಳಿಗೆ ಉದ್ಯೋಗಗಳು ಲಭಿಸುತ್ತಿಲ್ಲ ಎಂದು ಆಪಾದಿಸಿದರು.

ಸಮಿತಿಯ ಪ್ರಮುಖರಾದ ದುರ್ಗಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಕಾರ್ಮಿಕರಿಗಿಂತ ಹೆಚ್ಚಾಗಿ ಗುತ್ತಿಗೆ ಕಾರ್ಮಿಕರು ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆÉ. ಹಲವು ವರ್ಷಗಳಿಂದ ನಮ್ಮ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದರೂ. ಸಮಸ್ಯೆ ಬಗೆಹರಿಸಲು ಯಾರೊಬ್ಬರೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಡವಾಳಗಾರರ ಪರವಾಗಿ ಜಾರಿಗೆ ತಂದಂತಹ ನೋಟು ಅಮಾನ್ಯಿಕರಣದಿಂದಾಗಿ ಸಣ್ಣ ಹಾಗೂ ಲಘು ಉದ್ಯಮದಾರರಿಗೆ ತೊಂದರೆ ಯಾಗಿದೆ. ಇದರಿಂದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿ ದ್ದಾರೆ.

ದೇಶದ ಹಲವು ಕಾರ್ಮಿಕರಿಗೆ ಬೋನಸ್, ಪಿಎಫ್, ಇಎಸ್‍ಐ, ಗುರುತಿನ ಚೀಟಿ ಮತ್ತು ಸೇವಾ ಭದ್ರತೆಯನ್ನು ನೀಡುತ್ತಿಲ್ಲ, ಕಾರ್ಮಿಕರ ಹಕ್ಕನ್ನು ನಿರಂತರ ಹೋರಾಟಗಳ ಮುಖಾಂತರ ಪಡೆಯುವದು ಅನಿವಾರ್ಯವಾಗಿದೆ ಎಂದು ದುರ್ಗಪ್ರಸಾದ್ ಹೇಳಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿದ್ದಾಗ ಕಾರ್ಮಿಕರ ಪರವಾಗಿ ಜಾರಿಗೆ ತಂದಿರುವ 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಕೆಲವನ್ನು ವಿಲೀನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗವು ಕಾರ್ಮಿಕರಿಗೆ ಕನಿಷ್ಟ 18 ಸಾವಿರ ವೇತನ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿ 2 ವರ್ಷ ಕಳೆದರೂ ಇನ್ನೂ ಕನಿಷ್ಟ ವೇತನ ನಿಗದಿ ಮಾಡಲು ಸಾಧ್ಯವಾಗಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಕೇಂದ್ರ ಸರ್ಕಾರದ ಭರವಸೆಗಳು ಸಂಪೂರ್ಣ ಸುಳ್ಳಾಗಿವೆ, ಇದರಿಂದ ಉನ್ನತ ವಿದ್ಯಾಭ್ಯಾಸಗಳನ್ನು ಮಾಡಿರುವ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಭರತ್ ದೂರಿದರು.

ಪ್ರತಿಭಟನೆಯ ನೇತೃತ್ವವನ್ನು ಐ.ಎನ್.ಟಿ.ಯು.ಸಿ ಮುಖಂಡ ನಾಗರಾಜ್, ಸಿ.ಐ.ಟಿ. ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್, ಎಯುಟಿಯುಸಿ ಜಿಲ್ಲಾ ಸಂಘಟಕಿ ಆಶಾ, ಅಂಗನವಾಡಿ ಕಾರ್ಯಕರ್ತರ ಜಿಲ್ಲಾಧ್ಯಕ್ಷೆ ಕೆ.ಪಿ. ಕಾವೇರಮ್ಮ, ಎ. ಮಹದೇವ್, ವಿ.ಜೆ. ಆಂಥೋಣಿ ವಹಿಸಿದ್ದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ವಾಹನ ಚಾಲಕರ ಸಂಘ, ಗ್ರಂಥಪಾಲಕರ ಸಂಘಟನೆ, ಬಿಎಸ್‍ಎನ್‍ಎಲ್ ಕಾರ್ಮಿಕರು ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಭಾಗವಹಿಸಿದ್ದವು.

ಬೇಡಿಕೆಗಳು: ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ತಡೆಗಟ್ಟಬೇಕು. ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಟಿಸಬೇಕು. ಕಾರ್ಮಿಕರಿಗೆ ರೂ. 18 ಸಾವಿರ ಕನಿಷ್ಟ ವೇತನ ಜಾರಿ ಮಾಡಬೇಕು. ಗುಲಾಮರನ್ನಾಗಿಸುವ ಕಾನೂನು ತಿದ್ದುಪಡಿ ನಿಲ್ಲಿಸಬೇಕು. ಸ್ಕೀಂ ನೌಕರರನ್ನು ಖಾಯಂ ಮಾಡ ಬೇಕು. ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ನೀಡಬೇಕು. ರೈತರ ಆತ್ಮಹತ್ಯೆ ತಡೆಗಟ್ಟಬೇಕು.