ಸೋಮವಾರಪೇಟೆ,ಜ.9: ಅನಾಮಧೇಯ ಕರೆಗಳಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಬ್ಯಾಂಕ್‍ಗಳೂ ಸಹ ತಮ್ಮ ಖಾತೆದಾರರಿಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ಆಗಾಗ್ಗೆ ಕಳುಹಿಸುತ್ತಿದ್ದರೂ ಸಹ ಅನಾಮಧೇಯ ಕರೆಗಳಿಗೆ ಬ್ಯಾಂಕ್ ಮಾಹಿತಿ ನೀಡಿ ಪಂಗನಾಮ ಹಾಕಿಸಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಇವರುಗಳ ಸಾಲಿಗೆ ಇದೀಗ ಅಭಿಮಠ ಬಾಚಳ್ಳಿ ಗ್ರಾಮದ ಧನ್ಯಕುಮಾರ್ ಸೇರಿದ್ದಾರೆ. ಅಭಿಮಠ ಬಾಚಳ್ಳಿ ಗ್ರಾಮದ ಧನ್ಯಕುಮಾರ್ ಅವರು ಶಾಂತಳ್ಳಿಯ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದು, ಕಳೆದ ತಾ. 3ರಂದು ಇವರ ಮೊಬೈಲ್‍ಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದೆ.
918809875693 ಸಂಖ್ಯೆಯಿಂದ ಕರೆ ಬಂದಿದ್ದು, ನಾವು ಬ್ಯಾಂಕಿನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಖಾತೆಯನ್ನು ರಿನೀವಲ್ ಮಾಡಬೇಕು, ನಿಮ್ಮ ಖಾತೆಯಲ್ಲಿ ಹಣ ಎಷ್ಟು ಇದೆ? ಎಟಿಎಂನ ನಂಬರ್ ತಿಳಿಸಿ ಎಂದು ಕೇಳಿದ್ದಾರೆ.
ನಿಜವಾಗಿಯೂ ಬ್ಯಾಂಕಿನವರೇ ಕರೆ ಮಾಡಿದ್ದಾರೆ ಎಂದು ನಂಬಿದ ಧನ್ಯಕುಮಾರ್, ಮಾಹಿತಿಯನ್ನು ಒದಗಿಸಿದ್ದಾರೆ. ಇದಾಗಿ ತಾ. 7ರಂದು ಬ್ಯಾಂಕಿಗೆ ತೆರಳಿ ಪಾಸ್ ಪುಸ್ತಕಕ್ಕೆ ಎಂಟ್ರಿ ಹಾಕಿಸುವ ಸಂದರ್ಭ ತಾ. 3ರಂದು 18 ಸಾವಿರ ಹಣ ಡ್ರಾ ಆಗಿರುವದು ಕಂಡುಬಂದಿದೆ.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ ಸಂದರ್ಭ, ಪೊಲೀಸರು ಮೊಬೈಲ್‍ಗೆ ಕರೆ ಮಾಡಿದ್ದಾರೆ. ಆದರೆ ಅದಾಗಲೇ ಮೊಬೈಲ್ ಸ್ವಿಚ್‍ಆಫ್ ಆಗಿದೆ. ಯಾರ ವಿರುದ್ಧ ದೂರು ದಾಖಲಿಸಿಕೊಳ್ಳುವದು ಎಂಬ ದ್ವಂದ್ವದಲ್ಲಿಯೇ ಧನ್ಯಕುಮಾರ್ ಅವರನ್ನು ವಾಪಸ್ ಕಳುಹಿಸಿದ್ದಾರೆ.
ಒಟ್ಟಾರೆ ಅನಾಮಧೇಯ ವ್ಯಕ್ತಿಗಳಿಗೆ ಬ್ಯಾಂಕಿನ ಮಾಹಿತಿ ನೀಡಿ ಪಂಗನಾಮ ಹಾಕಿಸಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ನಿಮ್ಮ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಆಗಿಂದಾಗ್ಗೆ ಬ್ಯಾಂಕ್‍ಗಳಿಂದ ಸಂದೇಶಗಳು ಬರುತ್ತಿದ್ದರೂ ಸಹ ಮತ್ತೆ ಮತ್ತೆ ಮೋಸಕ್ಕೆ ಒಳಗಾಗುತ್ತಿರುವದು ವಿಪರ್ಯಾಸ!
ಇನ್ನಾದರೂ ತಮ್ಮ ಬ್ಯಾಂಕ್, ಎಟಿಎಂ ಪಿನ್ ನಂಬರ್‍ಗಳ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಅನಾಮಧೇಯ ಕರೆಗಳಿಂದ ಮಾಹಿತಿ ಕೇಳಿದರೆ ಖುದ್ದು ನಾವುಗಳೇ ಬ್ಯಾಂಕಿಗೆ ಬರುತ್ತೇವೆ ಎಂದುಬಿಡಿ!
- ವಿಜಯ್