ಸೋಮವಾರಪೇಟೆ, ಜ. 9: ನಿನ್ನೆ ದಿನ ತಾಲೂಕಿನ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟ ವೀಕ್ಷಣೆಗೆ ಬಂದಿದ್ದ ಮೈಸೂರಿನ ಯುವಕನೋರ್ವನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಭಗ್ನ ಪ್ರೇಮ ಕಾರಣ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಯುವಕನ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಾಲೂಕಿನ ಕಿರಗಂದೂರು ಗ್ರಾಮದ ಮಕ್ಕಳ ಗುಡಿ ಬೆಟ್ಟಕ್ಕೆ ನಿನ್ನೆ ಸಂಜೆ ಆಗಮಿಸಿದ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ರಾಯಪುರ ನಿವಾಸಿ, ಕೆಲವು ವರ್ಷಗಳಿಂದ ಮೈಸೂರಿನ ಎಸ್‍ಬಿಐ ಶಾಖೆಯೊಂದರ ಗ್ರಾಮೀಣ ಪ್ರತಿನಿಧಿಯಾಗಿರುವ ರಾಕೇಶ್ ಗೌಡ(26) ಎಂಬಾತನ ಮೇಲೆ ಸ್ಥಳೀಯ ಅಪ್ರಾಪ್ತ ಯುವಕನೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ, ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಮೈಸೂರಿಗೆ ಸಾಗಿಸಲಾಗಿದೆ.
ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಗಾಯಾಳು ಯುವಕನ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತ ಹಲ್ಲೆ ನಡೆಸಿದ ಅಪ್ರಾಪ್ತ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಘಟನೆಗೆ ಪ್ರೇಮ ಪ್ರಕರಣ ಕಾರಣ ಎಂಬದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ: ಕಿರಗಂದೂರಿನ ಯುವಕ ಮತ್ತು ಪಟ್ಟಣ ಸಮೀಪದ ಗ್ರಾಮವೊಂದರ ಯುವತಿ ಇಲ್ಲಿನ ಕಾಲೇಜೊಂದರಲ್ಲಿ ಕಳೆದ 2016-17ನೇ ಸಾಲಿನಲ್ಲಿ ಒಟ್ಟಿಗೆ ಪಿಯುಸಿ ವ್ಯಾಸಂಗ ಮಾಡಿದ್ದು, ಈ ಸಂದರ್ಭ ಯುವಕ-ವಿದ್ಯಾರ್ಥಿನಿಗೆ ಪ್ರೇಮ ಪತ್ರ ನೀಡಿದ್ದ ಎನ್ನಲಾಗಿದೆ.
ಈ ಪತ್ರವನ್ನು ವಿದ್ಯಾರ್ಥಿನಿ ಕಾಲೇಜು ಪ್ರಾಂಶುಪಾಲರಿಗೆ ನೀಡಿದ್ದು, ಯುವಕನಿಗೆ ಬುದ್ದಿವಾದ ಹೇಳಿದ್ದಾರೆ. ಇದಾಗ್ಯೂ ಯುವಕ ಮತ್ತೆ ಮತ್ತೆ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಯುವತಿ ತನ್ನ ಅಣ್ಣ ರಾಕೇಶ್ ಗೌಡನಿಗೆ ಹೇಳಿ ನಿನಗೆ ಬುದ್ಧಿ ಕಲಿಸುತ್ತೇವೆ ಎಂದು ಗದರಿದ್ದಾಳೆ.
ರಾಕೇಶ್ ಗೌಡನನ್ನು ಫೇಸ್‍ಬುಕ್‍ನಲ್ಲಿ ಹುಡುಕಿದ ಆರೋಪಿ, ನಿನ್ನೆ ದಿನ ಅದೇ ರಾಕೇಶ್ ಅಚಾನಕ್ಕಾಗಿ ಕಿರಗಂದೂರು ಗ್ರಾಮಕ್ಕೆ ಬಂದಿದ್ದು, ಹೊಟೇಲ್‍ಗೆ ತೆರಳಿ ಮಕ್ಕಳಗುಡಿ ಬೆಟ್ಟದ ದಾರಿ ಕೇಳಿದ್ದಾನೆ. ಈ ಸಂದರ್ಭ ಆರೋಪಿಯೂ ಹೊಟೇಲ್‍ನಲ್ಲಿದ್ದು, ರಾಕೇಶ್‍ನನ್ನು ಗುರುತು ಹಿಡಿದಿದ್ದಾನೆ.
ಇದಾಗಿ ಕೆಲ ಸಮಯದಲ್ಲೇ ರಾಕೇಶ್ ಮಕ್ಕಳ ಗುಡಿ ಬೆಟ್ಟಕ್ಕೆ ತೆರಳಿದ್ದು, ಹಿಂಬದಿಯೇ ತೆರಳಿದ ಆರೋಪಿ, ಕೈಗೆ ಸಿಕ್ಕಿದ ದೊಣ್ಣೆಯಿಂದ ಮನಸೋಯಿಚ್ಛೆ ಹಲ್ಲೆ ನಡೆಸುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತಲೆ, ಮುಖದ ಭಾಗಕ್ಕೆ ತೀವ್ರ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲೇ ರಾಕೇಶ್ ಕೆಳಬಿದ್ದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ವೀವ್ ಪಾಯಿಂಟ್‍ನಿಂದ ಕೆಳ ಭಾಗಕ್ಕೆ ಎತ್ತಿ ಹಾಕುವ ಯತ್ನಕ್ಕೆ ಮುಂದಾಗಿದ್ದಾನೆ.
ಅದೃಷ್ಟವಶಾತ್ ನೀರಿನ ಮೋಟಾರ್ ಚಾಲೂ ಮಾಡಲೆಂದು ಅದೇ ಸಮಯಕ್ಕೆ ಶಿವಣ್ಣ ಬಾಬು ಸ್ಥಳಕ್ಕೆ ಆಗಮಿಸಿದ್ದು, ಇವರನ್ನು ಕಂಡೊಡನೇ ಆರೋಪಿ ಕಾಡಿನೊಳಗೆ ಓಡಿ ಕಣ್ಮರೆಯಾಗಿದ್ದಾನೆ. ತೀವ್ರ ರಸ್ತಸ್ರಾವದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ರಾಕೇಶ್‍ನನ್ನು ಶಿವಣ್ಣ ಹಾಗೂ ಕುಂಬೂರಿನ ಆಟೋ ಚಾಲಕ ವಿಜಯ್ ಮುಖ್ಯ ರಸ್ತೆಗೆ ಸಾಗಿಸಿ, ಅಂಬುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕಾಗಮಿಸಿದ್ದು, ಈ ಸಂದರ್ಭ ಆರೋಪಿ ಬಟ್ಟೆ ಬದಲಿಸಿ ಬೆಟ್ಟದ ಸಮೀಪದಲ್ಲೆ ತಿರುಗಾಡುತ್ತಿದ್ದ. ಕುತ್ತಿಗೆ ಭಾಗದಲ್ಲಿ ರಕ್ತದ ಕಲೆ, ಮೈ ಕೈಯಲ್ಲಿ ಪರಚಿದ ಗಾಯವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪ್ರಾಪ್ತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಆರೋಪಿಯನ್ನು ಮಡಿಕೇರಿಯ ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ, ಮೈಸೂರಿನ ಬಾಲ ಮಂದಿರಕ್ಕೆ ಕರೆದೊಯ್ಯಲಾಗುವದು ಎಂದು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.