ಶನಿವಾರಸಂತೆ, ಜ. 9: ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿ ತಾ. 16 ರಂದು ಶ್ರೀ ಬಾಣಂತಮ್ಮ ಮತ್ತು ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

ಪ್ರತಿ ವರ್ಷ ಮಕರ ಸಂಕ್ರಾಂತಿಯ ಮಾರನೇ ದಿನ ನಡೆಯುವ ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಭಕ್ತಾದಿಗಳ ಹರಕೆ ಈಡೇರುತ್ತದೆ ಎಂಬ ನಂಬಿಕೆಯೂ ಜನ ಮನದಲ್ಲಿದ್ದು ಶನಿವಾರಸಂತೆ, ಹಂಡ್ಲಿ, ಕೊಡ್ಲಿಪೇಟೆ ಇತ್ಯಾದಿ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

ಗ್ರಾಮದ ಬಾಣಂತಮ್ಮ ದೇವಿಗೆ 7 ಜನ ಗಂಡು ಮಕ್ಕಳು. ಪೌತಿ ಗೋಪಾಲಕೃಷ್ಣ ದೇವರನ್ನು ಶನಿವಾರಸಂತೆಗೆ ಸಮೀಪದ ಕೆರೆಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ. 7 ಜನ ಗಂಡು ಮಕ್ಕಳಲ್ಲಿ ಹಿರಿಯರಾದ ದೊಡ್ಡಯ್ಯನನ್ನು ಕೊಂಗಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿ ವರ್ಷ ಅಲ್ಲಿ ಸಂಕ್ರಾಂತಿ ಹಬ್ಬದ ನಂತರ ದೊಡ್ಡಯ್ಯನ ಜಾತ್ರೆ ನಡೆಯುತ್ತದೆ. 2ನೇ ಮಗ ಕುಮಾರಲಿಂಗೇಶ್ವರ ಸ್ವಾಮಿಯನ್ನು ಶಾಂತಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು ಪ್ರತಿ ವರ್ಷ ಜ. 16 ರಂದು ಕುಮಾಲಿಂಗೇಶ್ವರ ಜಾತ್ರೆ ನಡೆಯುತ್ತದೆ. 3ನೇ ಮಗನನ್ನು ಹುಲುಕೋಡು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಹುಲುಕೋಡಯ್ಯನ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ. 4ನೇ ಮಗ ದೊಡ್ಡಕುಂದೂರು ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿದ್ದು ಪ್ರತಿ ವರ್ಷ ಜ. 17 ರಂದು ಒಬ್ಬೆ ಕುಮಾರಲಿಂಗೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ.

5ನೇ ಮಗನನ್ನು ಹೆತ್ತೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಪ್ರತಿ ವರ್ಷ ಜ. 16 ರಂದು ಹೆತ್ತೂರು ಕುಮಾರಲಿಂಗೇಶ್ವರ ಎಂಬ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ. 6ನೇ ಮಗ ಕಿತ್ತೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದು, ಅಲ್ಲಿಯು ಜ 16 ರಂದು ಕಿತ್ತೂರು ಶ್ರೀ ಕುಮಾರಲಿಂಗೇಶ್ವರ ಎಂಬ ಹೆಸರಿನಲ್ಲಿ ಜಾತ್ರೆ ನಡೆಯುತ್ತಿರುವದು ಇತಿಹಾಸಿಕರವಾಗಿದೆ.

ಬಾಣಂತಮ್ಮ ದೇವಿಯ ಕೊನೆಯ ಮಗ ಕುಂಟ ಶ್ರೀ ಕುಮಾರಲಿಂಗೇಶ್ವರ. ಈತನೂ ತನ್ನನ್ನು ತೊರೆದು ಬೇರೆಡೆಗೆ ಹೋಗುತ್ತಾನೆ ಎಂದು ಭಾವಿಸಿ, ತಾಯಿ ಬಾಣಂತಮ್ಮ ದೇವಿ ದೊಣ್ಣೆಯಿಂದ ಮಗನ ಕಾಲಿಗೆ ಹೊಡೆದು ಒಂದು ಕಾಲನ್ನು ಮುರಿದು ಕೂರಿಸಿದಳಂತೆ. ತಾನು ಬೆಂಬಳೂರು ಗ್ರಾಮದಲ್ಲೇ ಉಳಿದರೆ ತನಗೇನು ಕೊಡುವೆ ಎಂದು ಮಗ ತಾಯಿಯನ್ನು ಪ್ರಶ್ನಿಸಿದಾಗ ತಾಯಿ ಪ್ರತಿ ವರ್ಷ ಮಕರ ಸಂಕ್ರಾತಿಯ ಮರುದಿನ ನಡೆಯುವ ಜಾತ್ರೆಯಲ್ಲಿ ಒಪ್ಪೊತ್ತಿನ ಜಾತ್ರೆಯನ್ನು ಬಿಟ್ಟುಕೊಡುವದಾಗಿ ಮಾತುಕೊಟ್ಟಳಂತೆ. ಅದರಂತೆ ಪ್ರತಿ ವರ್ಷ ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯುವ ಒಂದು ದಿನದ ಜಾತ್ರೆಯಲ್ಲಿ ಬೆಳಿಗ್ಗೆ ತಾಯಿ ಶ್ರೀ ಬಾಣಂತಮ್ಮನ ಹೆಸರಿನಲ್ಲಿ ಜಾತ್ರೆ ನಡೆದರೆ, ಮಧ್ಯಾಹ್ನದ ನಂತರ ಕುಂಟ ಶ್ರೀ ಕುಮಾರಲಿಂಗೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ. ಕುದುರೆಯ ಮೇಲೆ ಕುಳಿತಿರುವ ಕುಮಾರಲಿಂಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಕುಂಟುತ್ತಲೇ ಮೆರವಣಿಗೆಯಲ್ಲಿ ತರಲಾಗುತ್ತದೆ.

ಬೆಂಬಳೂರು ಗ್ರಾಮದ ಗೌಡನ ಮನೆ ಕಲ್ಲೇಗೌಡರು ತೋಡಿಸಿದ ದೊಡ್ಡಕೆರೆಯಲ್ಲಿ ನೀರು ಬಾರದಿದ್ದಾಗ ಶ್ರೀ ಬಾಣಂತಮ್ಮ ದೇವಿಯನ್ನು ಪೂಜಿಸಲಾಗಿ ಕೆರೆ ನೀರಿನಿಂದ ತುಂಬಿ ತುಳುಕಿತಂತೆ ಅಂದಿನಿಂದ ಬಾಣತಮ್ಮ ಅಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟು ಪ್ರತಿ ವರ್ಷ ಪೂಜೆ ನಡೆದು, ಜಾತ್ರೆ ನಡೆಯುತ್ತದೆ.

-ನರೇಶಚಂದ್ರ