ಕಳೆದ ಆಗಸ್ಟ್ ತಿಂಗಳ ಮಹಾಮಳೆಗೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಹಾನಿಗೊಳಗಾಯಿತು. ಇತಿಹಾಸದ ನಗರಸಭೆಗೆ ಸೇರಿದ ಕಟ್ಟಡ ಸೇರಿದಂತೆ ಹಲವಷ್ಟು ಅಂಗಡಿ ಮಳಿಗೆಗಳು ಮಣ್ಣು ಕುಸಿತದಿಂದ ನೆಲೆ ಕಳೆದುಕೊಂಡವು.

ಅನಿವಾರ್ಯವಾಗಿ ಅಲ್ಲಿದ್ದ ಕಟ್ಟಡಗಳನ್ನೆಲ್ಲ ನೆಲಸಮ ಮಾಡಿದಾಗ ಉಳಿದುಕೊಂಡದ್ದು ಕೇವಲ ಮಣ್ಣಿನ ಬರೆ ಮಾತ್ರ. ಬರೆಯ ಒಂದು ಬದಿ ಎತ್ತರ 79 ಅಡಿ! ಮತ್ತೊಂದು ಬದಿ 62 ಅಡಿ! ಉದ್ದ ಸುಮಾರು 100 ಅಡಿ. ಮುಂದಿನ ಮಳೆಗಾಲದ ಮುನ್ನ ತಡೆಗೋಡೆ ನಿರ್ಮಾಣ ಆಗಲೇಬೇಕಾದ ಅನಿವಾರ್ಯತೆಯಿಂದ ಜಿಲ್ಲಾಧಿಕಾರಿಗಳು ಇದಕ್ಕಾಗಿ 1.20 ಕೋಟಿ ರೂಪಾಯಿ ಮೀಸಲಿಟ್ಟು ಕೂಡಲೇ ಕೆಲಸ ಆರಂಭಿಸುವಂತೆ ನಗರಸಭೆಗೆ ಸೂಚಿಸಿದರು. ಯಾವದೇ ಹೊಸ ತಂತ್ರಜ್ಞಾನವಿಲ್ಲದೆ ಹಳೆ ರೀತಿಯಲ್ಲಿ ಅಧಿಕಾರಿಗಳಿಂದ ನಕ್ಷೆ ತಯಾರಾಗಿ ಗುತ್ತಿಗೆ ನೀಡಲಾಯಿತು. ಬಿದ್ದ ಬರೆಯಿಂದ ನೆಲಮಟ್ಟದಲ್ಲಿ ಸುಮಾರು ಹತ್ತು ಅಡಿ ಎದುರಿನಿಂದ ಓರೆಯಾಗಿ ತಡೆಗೋಡೆ ನಿರ್ಮಾಣಕ್ಕಾಗಿ ಜೆಸಿಬಿ ಬಳಸಿ ಮಣ್ಣು ಸರಿಪಡಿಸುವ ಕೆಲಸ ಆರಂಭಗೊಂಡಿತು.

ಮುಂದಿನ ದಿನಗಳಲ್ಲಿ ಅಲ್ಲಿ ನಗರಸಭಾ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗುವದು ಎಂಬ ವಿಷಯವು ಸಾರ್ವಜನಿಕ ವಲಯದಲ್ಲಿ ಹರಿದಾಡತೊಡಗಿತು.

ಇದನ್ನು ಅರಿತ ಮೈಸೂರು ಮಿತ್ರ ಪತ್ರಿಕೆ ಸಂಪಾದಕ ಕೆ.ಬಿ. ಗಣಪತಿ ಅವರು ಈ ಜಾಗವನ್ನು ಕಟ್ಟಡ ಮುಕ್ತ ಪ್ರದೇಶವನ್ನಾಗಿಸುವದು ಸೂಕ್ತ ಎಂದು ಸಲಹೆ ನೀಡಿ ವಿದೇಶಗಳಲ್ಲೂ ಪಟ್ಟಣ ಮಧ್ಯೆ ಇಂತಹ ತೆರೆದ ಜಾಗಗಳಿದ್ದು, ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದೆಂದು ಸಲಹೆ ನೀಡಿದ್ದರು.

ಇದೊಂದು ಉತ್ತಮ ಸಲಹೆ ಎಂದು ಭಾವಿಸಿದ ನಾನು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ತಡೆಗೋಡೆ ನಿರ್ಮಿಸುವಾಗಲೇ ಅದೊಂದು ಅಲಂಕಾರಿಕ ಗೋಡೆಯಾಗಿ ನಿರ್ಮಿಸುವಂತೆ ವಿನಂತಿಸಿಕೊಂಡೆ. ಈ ಬಗ್ಗೆ ಆಸಕ್ತಿ ತೋರಿದ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರಲ್ಲಿ ಪ್ರಸ್ತಾಪಿಸಿದರು. ಅಲ್ಲಿಂದಲೂ ಹಸಿರು ನಿಶಾನೆ ದೊರೆಯಿತು. ಜಿಲ್ಲಾಧಿಕಾರಿಗಳು ನಗರಸಭಾ ಅಧ್ಯಕ್ಷರನ್ನು ಸಂಪರ್ಕಿಸಿ ಯೋಜನೆ ರೂಪಿಸುವಂತೆ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನನ್ನನ್ನು ಸಂಪರ್ಕಿಸಿದರು. ನನಗಿಂತಲೂ ಹೆಚ್ಚಾಗಿ ವಿದೇಶ ಸುತ್ತುವ ಚೀಯಂಡ ಸತ್ಯ ಅವರ ನೆನಪಾಗಿ ಅವರ ನೆರವನ್ನು ಕೋರಿದೆ. ಇದೊಂದು ಒಳ್ಳೆಯ ಯೋಜನೆಯೆಂದು ಪ್ರಶಂಸಿಸಿದ ನಗರಸಭೆಯ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್ ಈ ಬಗ್ಗೆ ನೀಲಿ ನಕ್ಷೆ ತಯಾರಿಸಲು ನಮ್ಮಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಸುಮಾರು 70 ಅಡಿಯ ತಡೆಗೋಡೆ ಹಳೆಯ ತಂತ್ರಜ್ಞಾನದಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ಸುಮಾರು 5 ಕೋಟಿ ಖರ್ಚಾಗಬಹುದೆಂಬ ಮಾಹಿತಿ ಪಡೆದ ನಾನು ಹೊಸ ತಂತ್ರಜ್ಞಾನದ ಅನುಭವವಿರುವ ನಮ್ಮವರೇ ಆದ ನಿವೃತ್ತ ಕಾರ್ಯಪಾಲಕ ಅಭಿಯಂತರ ಸತ್ಯನಾರಾಯಣ ರಾವ್ ಅವರನ್ನು ಸಂಪರ್ಕಿಸಿದೆ. ಆ ತಡೆಗೋಡೆಯನ್ನು ಯಾವ ರೀತಿಯಲ್ಲಿ ಸುಂದರವಾಗಿಸಬಹುದು ಎಂಬ ಬಗ್ಗೆ ಕೇರಳದ ಪ್ರಸಿದ್ಧ ವಾಸ್ತು ಶಿಲ್ಪಿ ಹಾಗೂ ಐತಿಹಾಸಿಕ ಸಂರಕ್ಷಣೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಪ್ರವೀಣ್‍ಚಂದ್ರ ಅವರನ್ನು ಸತ್ಯ ಸಂಪರ್ಕಿಸಿದರು. ಎಲ್ಲರೂ ಜೊತೆಯಲ್ಲಿ ಮಡಿಕೇರಿಯಲ್ಲಿ ಭೇಟಿ ಮಾಡುವ ದಿನಾಂಕ ನಿರ್ಧಾರವಾಗಿ ನೀಲಿ ನಕ್ಷೆಗೆ ತಯಾರಾದೆವು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವ ದಿನಾಂಕವನ್ನು ನಿರ್ಧರಿಸಲಾಯಿತು. ಈ ಇಬ್ಬರು ತಜ್ಞರೊಂದಿಗೆ ಬೆಂಗಳೂರಿನ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಣ್ಣು ತಂತ್ರಜ್ಞಾನದಲ್ಲಿ ಪಿಹೆಚ್‍ಡಿ ಪಡೆದಿರುವ ಡಾ. ಹೆಚ್.ಬಿ. ನಾಗರಾಜ್ ಹಾಗೂ ತಲಕಾವೇರಿ ಅಭಿವೃದ್ಧಿ ಪಡಿಸಿದ ಎಂ.ಜಿ. ಸೋಮಶೇಖರ್ ಅವರುಗಳನ್ನು ಸತ್ಯನಾರಾಯಣ ರಾವ್ ಸಭೆಗೆ ಆಹ್ವಾನಿಸಿದರು.

ಜಿಲ್ಲಾಧಿಕಾರಿ, ಎಸ್ಪಿ, ಹಿರಿಯ ಅಧಿಕಾರಿಗಳು, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ, ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್, ಸತ್ಯ ಹಾಗೂ ನಾನು ಭಾಗವಹಿಸಿದ್ದೆವು. ಸುಮಾರು ಒಂದೂವರೆ ಗಂಟೆಗಳ ಕಾಲ ನೂತನ ತಂತ್ರಜ್ಞಾನದಲ್ಲಿ ತಡೆಗೋಡೆ ನಿರ್ಮಾಣದ ಬಗ್ಗೆ ತಂತ್ರಜ್ಞರು ವಿವರಿಸಿದರು. ಗೋಡೆಯ ದಪ್ಪ ಈಗಿನ 10 ಅಡಿ ಬದಲಿಗೆ ಕೇವಲ ಅರ್ಧ ಅಡಿ, ಈಗ ಸುಮಾರು 8 ಅಡಿ ಎತ್ತರದ ಗೋಡೆಗೆ ಖರ್ಚಾಗುವ 1.2 ಕೋಟಿ ರೂಪಾಯಿಯಲ್ಲಿ 40 ಅಡಿಗೂ ಹೆಚ್ಚು ಎತ್ತರದ ಗೋಡೆ ನಿರ್ಮಾಣದ ಸಾಧ್ಯತೆ. ಅಂದರೆ ಕಡಿಮೆ ಖರ್ಚು, ಕೇವಲ ಎರಡು ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಸಭೆಗೆ ವಿವರಿಸಲಾಯಿತು.

ಇದೇ ತಡೆಗೋಡೆಯನ್ನು ಬಳಸಿ ಎರಡನೇ ಹಂತದಲ್ಲಿ ಅದನ್ನು ವಿವಿಧ ಅಲಂಕಾರಿಕ ಕಲ್ಲುಗಳಿಂದ ಸುಂದರಗೊಳಿ ಸುವ ಬಗ್ಗೆ ಶಿಲ್ಪಿ ವಿವರಣೆ ನೀಡಿದರು. ತಡೆಗೋಡೆಯ ಒಟ್ಟು ಎತ್ತರವನ್ನು ಮೂರು ಹಂತಗಳಲ್ಲಿ ವಿಂಗಡಿಸಿ ಪ್ರತಿ ಹಂತದಲ್ಲಿಯೂ ಜನ ನಿಂತು ನಗರವನ್ನು ವೀಕ್ಷಿಸುವ ಅವಕಾಶ, ತಡೆಗೋಡೆಯ ಎರಡೂ ಬದಿಗಳಲ್ಲಿ ವೃತ್ತಾಕಾರದಲ್ಲಿ ಮೇಲೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆ, ತುತ್ತ ತುದಿ ತಲಪಿದ ಬಳಿಕ ಎರಡೂ ಬದಿಗಳಲ್ಲಿ ಟೆಲಿಸ್ಕೋಪ್ ಮೂಲಕ ಮಡಿಕೇರಿ ಸೌಂದರ್ಯವನ್ನು ವೀಕ್ಷಿಸಬಹುದಾದ ನಕ್ಷೆಯನ್ನು ಪ್ರದರ್ಶಿಸಲಾಯಿತು.

ನೆಲ ಹಂತದಲ್ಲಿ ನೆಲಹಾಸು ಹಾಕಿ ಆಸನದ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಅಗತ್ಯವಿದ್ದಲ್ಲಿ ಪುಟ್ಟ ಸ್ಟೇಜ್ ನಿರ್ಮಿಸಬಹುದೆಂದು ವಿವರಿಸಲಾಯಿತು.