ತಂತ್ರಜ್ಞರೂ ಅಲ್ಲದ, ಗುತ್ತಿಗೆದಾರರೂ ಅಲ್ಲದ ನಗರಸಭಾ ಸದಸ್ಯರೂ ಅಲ್ಲದ ಸತ್ಯ ಹಾಗೂ ನನಗೆ ‘ಮಡಿಕೇರಿ ಸ್ಕ್ವೇರ್’ ಬಗ್ಗೆ ಆಸಕ್ತಿಯೇನು ಎಂದು ಹಲವರು ಪ್ರಶ್ನಿಸಿದ್ದಾರೆ ಹಾಗಾಗಿ ಈ ಕೆಳಗಿನ ವಿವರಣೆ.
*ನಗರದ ನಿವಾಸಿಗಳಾಗಿ - ಮತದಾರರಾಗಿ - ನಗರಸಭೆ ತೆರಿಗೆದಾರರಾಗಿ, ಮಡಿಕೇರಿಯ ಅಭಿವೃದ್ಧಿಗೆ ಸಲಹೆ ನೀಡುವ ಹಕ್ಕು ಹಾಗೂ ಜವಾಬ್ದಾರಿ ನಮಗಿದೆ ಎಂದುಕೊಂಡಿದ್ದೇವೆ.
*ಹಣ, ಹೆಸರು ಎರಡರ ಅಗತ್ಯವೂ ನಮಗಿಲ್ಲ. ಇದುವರೆಗಿನ ಖರ್ಚಿನಲ್ಲಿ ನಾವುಗಳು ಪಾಲುದಾರರಾಗಿರುವದಕ್ಕೆ ಪಶ್ಚಾತಾಪವೂ ಇಲ್ಲ.
*ಹಳೇ ಮಾದರಿಯಲ್ಲಿ ಗೋಡೆ ನಿರ್ಮಾಣವಾದರೆ 10 ಅಡಿ ಜಾಗ ಕಳೆದುಕೊಳ್ಳುವ ಬದಲು ಹೊಸ ತಂತ್ರಜ್ಞಾನದಂತೆ ಳಿ ಅಡಿ ಮಾತ್ರ ಅಗತ್ಯವಿರುವದರಿಂದ 89.5 ಅಡಿ ಹೆಚ್ಚು ಜಾಗ ಇಲ್ಲಿ ಲಭ್ಯವಾಗುವ ಅನುಕೂಲವೂ ಒದಗಲಿದೆ.
*ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಬೇಕೆಂಬ ನಗರಸಭೆಯ ಚಿಂತನೆಗೆ ಮುಂದೆ ಪ್ರಾಚ್ಯ ವಸ್ತು ಇಲಾಖೆ ತಡೆ ತರಬಹುದು ಎಂಬ ಆತಂಕ ನಮಗಿದೆ. ಯಾಕೆಂದರೆ ಕೋಟೆಯ ಹಿಂಬದಿಯ ಬೇಲಿ ಈ ತಡೆಗೋಡೆಯಿಂದ ಕೇವಲ 30 ಅಡಿ ಅಂತರದಲ್ಲಿದೆ ಹಾಗಾಗಿ ನಗರಸಭೆ ಕಟ್ಟಡ ಕಟ್ಟಿದರೆ ಮುಂದೆ ಅದರ ಬಳಕೆ ಸಾಧ್ಯವಾಗದೇ ಇರಬಹುದು.
*ಖಾಸಗಿ ಬಸ್ ನಿಲ್ದಾಣ ಸಂಪೂರ್ಣ ಸ್ಥಳಾಂತರಗೊಂಡ ಬಳಿಕ ಈ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟುಗಳು ನೆಲಕಚ್ಚಬಹುದು. ವ್ಯಾಪಾರಿಗಳು ಈಗಾಗಲೇ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಈ ಯೋಜನೆಯ ನಂತರ ಪಟ್ಟಣ ಮಧ್ಯೆ ಜನರ ಓಡಾಟ ಆರಂಭಗೊಂಡು ವ್ಯಾಪಾರ ವಹಿವಾಟು ಹೆಚ್ಚಾಗಬಹುದು.
*ವ್ಯಾಪಾರೋದ್ಯಮ ಈಗಾಗಲೇ ಕುಂಠಿತ ಗೊಂಡಿದ್ದು, ಅಂಗಡಿ ಮಳಿಗೆಗಳನ್ನು ಹೊಸದಾಗಿ ಪಡೆಯುವದು ಇರಲಿ, ತಿಂಗಳ ಬಾಡಿಗೆಯನ್ನು ಕೂಡ ಪಾವತಿಸಲಾಗದ ಸ್ಥಿತಿಯಲ್ಲಿ ವರ್ತಕ ಇದ್ದು, ನಗರಸಭೆ ಮಳಿಗೆಗಳನ್ನು ಕಟ್ಟಿದರೆ ಬಾಡಿಗೆದಾರರು ಬರಬಹುದೇ ಎಂದೂ ಚಿಂತಿಸಬೇಕಿದೆ.
*ಇದೇ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕೂಡ ಬೃಹತ್ ಮಾಲ್ ಅನ್ನು ನಿರ್ಮಿಸುತ್ತಿದ್ದು, ಅಲ್ಲಿಯೂ ಕೂಡ ಮುಂದೆ ಮಳಿಗೆಗಳು ಲಭ್ಯವಿರುತ್ತವೆ.
*ಈ ಜಾಗದಲ್ಲಿ ಅಂಗಡಿ ಕಳೆದುಕೊಂಡ ಸಂತ್ರಸ್ತರಿಗೆ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ನಗರಸಭೆ ಯೋಚಿಸಬಹುದು.
*ಮಡಿಕೇರಿ ಸ್ಕ್ವೇರ್ ಎಂಬ ಯೋಜನೆ ರೂಪುಗೊಂಡರೆ ನಗರದ ಜನತೆಗೂ ವಿಹಾರಕ್ಕೆಂದು ಒಂದು ಹೊಸ ಜಾಗ ಲಭಿಸಿದಂತಾಗುತ್ತದೆ.
*ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಈ ಹಿಂದೆ ಗುರುತಿಸಲಾಗಿದ್ದ ಕಾಲೇಜು ರಸ್ತೆ ಒಳಭಾಗದ ಸಿ.ಪಿ.ಸಿ. ಜಾಗದೊಂದಿಗೆ ವೈವಸ್ ಆಸ್ಪತ್ರೆಯ ಬಳಿ ಖಾಲಿ ಜಾಗವನ್ನು ನಗರಸಭೆ ಪರಿಗಣಿಸಬಹುದು.ಇನ್ನಾವುದೋ ಉತ್ತಮ ಮಾಹಿತಿಯ ಚಿತ್ರಗಳನ್ನು ಪ್ರದರ್ಶಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಬಹುದೆಂದು ತಂತ್ರಜ್ಞರು ವಿವರಿಸಿದರು.
ಜಿಲ್ಲಾಧಿಕಾರಿಗಳು ಕೊಟ್ಟಿದ್ದ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದೇವೆ ಎಂಬ ನೆಮ್ಮದಿಯಿಂದ ಅದನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಪ್ರಕಟಿಸಿ ನಾವು ಹಿಂತಿರುಗಿದೆವು. ಇಡೀ ಯೋಜನೆ ಬಗ್ಗೆ ನಗರಸಭೆಯ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿ ಎನ್ನುವ ಮನವಿಯನ್ನು ಅಧ್ಯಕ್ಷರಲ್ಲಿ ವಿನಂತಿಸುವದಕ್ಕೆ ಮರೆತಿರಲಿಲ್ಲ.
ಮೊನ್ನೆಯಷ್ಟೆ ಈ ಬಗ್ಗೆ ನಗರಸಭೆಯಲ್ಲಿ ವಿಶೇಷ ಸಭೆ ನಡೆದು ಹೆಚ್ಚಿನವರು ಈ ಯೋಜನೆಯನ್ನು ಬೆಂಬಲಿಸಿದರೆ, ಕೆಲವರು ವಿರೋಧಿಸಿದ್ದಾರೆಂದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾದ ಕೆಲ ಸ್ನೇಹಿತರು ನಂತರ ನನ್ನನ್ನು ಹಾಗೂ ಸತ್ಯ ಅವರನ್ನು ಸಂಪರ್ಕಿಸಿ ಈ ಎರಡನೆಯ ಹಂತದ ಯೋಜನೆ ಬಗ್ಗೆ ತಮಗೆ ನಗರಸಭಾ ಸಭೆಯಲ್ಲಿ ಯಾವದೇ ಮಾಹಿತಿ ನೀಡದ್ದರಿಂದ ಗೊಂದಲ ಉಂಟಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅವರುಗಳಿಗೆ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡಲಾಯಿತು.
ತಾ. 10 ರಂದು (ಇಂದು) ನಗರಸಭಾ ಕಲಾಪದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ ಯಂತೆ. ಇದೊಂದು ಉತ್ತಮ ಯೋಜನೆ ಎಂದು ಎಲ್ಲರಿಗೂ ಮನವರಿಕೆಯಾದಲ್ಲಿ ಒಪ್ಪಿಗೆ ನೀಡಿ ಮುಂದುವರಿಸಲಿ ಎಂಬ ಹಾರೈಕೆ. -ಜಿ. ಚಿದ್ವಿಲಾಸ್