ಸೋಮವಾರಪೇಟೆ, ಜ. 8: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೊಠಡಿಯ ಹೆಂಚು ತೆಗೆದು ಒಳಗೆ ಇಳಿದಿರುವ ಪುಂಡರು, ನೀರಿನ ಟ್ಯಾಪ್‍ಗಳನ್ನು ಕಿತ್ತೆಸೆದು, ಹೂ ಕುಂಡಗಳನ್ನು ಒಡೆಯುವ ಮೂಲಕ ದಾಂಧಲೆ ನಡೆಸಿದ್ದಾರೆ.ನಿನ್ನೆ ರಾತ್ರಿ ಶಾಲೆಯ ಆವರಣದೊಳಗೆ ಪ್ರವೇಶಿಸಿರುವ ಪುಂಡರು, ಹೂಕುಂಡಗಳನ್ನು ಒಡೆದು ಹಾಕಿದ್ದು, ಕುಡಿಯುವ ನೀರು ಒದಗಿಸಲು ನಿರ್ಮಿಸಲಾಗಿರುವ ಟ್ಯಾಂಕ್‍ಗಳಿಗೆ ಸಂಪರ್ಕ ಕಲ್ಪಿಸಿದ್ದ ಪೈಪ್‍ಗಳನ್ನು ಮುರಿದು, ಟ್ಯಾಪ್‍ಗಳನ್ನು ಕಿತ್ತೆಸೆದಿದ್ದಾರೆ. ಶಾಲೆಯೊಳಗೆ ಪುಂಡಾಟ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.