ಶನಿವಾರಸಂತೆ, ಜ.8: ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು ಗ್ರಾಮದ ಯುವಕ ಬಿ.ಬಿ. ಧಯಾಕರ (43) ಕಟ್ಟೆಪುರದ ಹೇಮಾವತಿ ನದಿಯ ಹಿನ್ನೀರಿನಲ್ಲಿ ಸೋಮವಾರ ಮುಳುಗಿ ಸಾವನ್ನಪ್ಪಿದ್ದಾರೆ.ಬೆಂಬಳೂರು ಗ್ರಾಮದ ಬಸವರಾಜಪ್ಪ ಅವರ ಪುತ್ರ ಬಿ.ಬಿ. ಧಯಾಕರ ನಿನ್ನೆ ತಮ್ಮ ಸಹಪಾಟಿಗಳಾದ ಲಂಕೇಶ್, ಸುರೇಶ್, ಪುಟ್ಟಸ್ವಾಮಿ ಹಾಗೂ ರವಿ ಅವರೊಂದಿಗೆ ಏಡಿ, ಮೀನು, ಹಿಡಿಯಲು ಕಟ್ಟೆಪುರದ ಹೇಮಾವತಿ ಹಿನ್ನೀರಿಗೆ ಹೋಗಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಸಂಜೆಯವರೆಗೆ ಹುಡುಕಾಡಿದರು. ಮೃತದೇಹ ಸಿಕ್ಕದ ಕಾರಣ ಇಂದು ಕುಶಾಲನಗರದ ಅಗ್ನಿ ಶಾಮಕದಳದವರು ಮೃತದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದರು. ಶನಿವಾರಸಂತೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯಾಧಿಕಾರಿ ಗಿರೀಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಭೇಟಿ ನೀಡಿದ್ದರು.