ಸೋಮವಾರಪೇಟೆ, ಜ.7: ಸ್ಥಳೀಯ ಪ್ರತಿಭೆಗಳಿಂದ ಮೂಡಿಬರುತ್ತಿರುವ, ಗೋಣಿಮರೂರು ಸರ್ಕಾರಿ ಶಾಲೆಯನ್ನೂ ಒಳಗೊಂಡಂತೆ ಚಿತ್ರೀಕರಣಗೊಳ್ಳುವ ವೃತ್ತಾಂತ ಚಲನಚಿತ್ರಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಸಮೀಪದ ಗೋಣಿಮರೂರು ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನೂತನ ಚಿತ್ರೀಕರಣಕ್ಕೆ ಚಾಲನೆ ನೀಡಿದ ಶಾಸಕರು ಮಾತನಾಡಿ, ಸೃಜನಾತ್ಮಕ ಚಲನಚಿತ್ರಗಳಿಂದ ಸಾಮಾಜಿಕ ಜಾಗೃತಿ ಸಾಧ್ಯ. ಜಿಲ್ಲೆಯ ಹಲವಷ್ಟು ಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವದು ಶ್ಲಾಘನೀಯ. ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ವೃತ್ತಾಂತ ಚಿತ್ರ ವೇದಿಕೆಯಾಗಲಿ ಎಂದರು.
ತನು ಪ್ರೊಡಕ್ಷನ್ ಅಡಿಯಲ್ಲಿ ನಿತಿನ್‍ಗೌಡ ನಿರ್ದೇಶಿಸಿ ನಾಯಕ ನಟನಾಗಿರುವ ವೃತ್ತಾಂತ ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳಾದ ಗಣಗೂರಿನ ವಿಕಿತ್, ಕಾಗಡಿಕಟ್ಟೆ ಭರತ್, ತಣ್ಣೀರುಹಳ್ಳದ ಆನಂದ್‍ರಾಜ್, ಶಶಿ, ಯಡೂರಿನ ಜೀವನ್ ಸೇರಿದಂತೆ ಇತರರು ಅಭಿನಯಿಸುತ್ತಿದ್ದಾರೆ.
ಚಲನಚಿತ್ರಕ್ಕೆ ಚಾಲನೆ ನೀಡಿದ ಸಂದರ್ಭ ಸರ್ಕಾರಿ ಶಾಲಾಭಿವೃದ್ದಿ ಸಮಿತಿಗಳ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧಲಿಂಗಪ್ಪ, ಪ್ರಮುಖರಾದ ಕೆಂಪರಾಜು, ಧರ್ಮಪ್ಪ, ಪುಟ್ಟಪ್ಪ, ಸುರೇಂದ್ರ ಸೇರಿದಂತೆ ಚಿತ್ರ ಕಲಾವಿದರು, ಸ್ಥಳೀಯರು ಉಪಸ್ಥಿತರಿದ್ದರು.