ಸೋಮವಾರಪೇಟೆ,ಜ.7: ಕಳೆದ 40 ವರ್ಷಗಳಿಂದ ಪೈಸಾರಿ ಜಾಗದಲ್ಲಿ ನೆಲೆಸಿರುವ ದಲಿತ ಕುಟುಂಬಕ್ಕೆ ನಿವೇಶನದ ದಾಖಲಾತಿ ಒದಗಿಸದೇ ಕಂದಾಯ ಇಲಾಖೆಯವರು ದೌರ್ಜನ್ಯ ಎಸಗಿದ್ದು, ಈ ಕ್ರಮದ ವಿರುದ್ಧ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾ ಸಂಚಾಲಕ ಕೆ.ಬಿ.ರಾಜು ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳ್ಳುಸೋಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಕುಟುಂಬವೊಂದರ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯವೆಸಗುತ್ತಿದ್ದು, ಜಿಲ್ಲಾಧಿಕಾರಿಗಳು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಸರ್ವೆ ನಂ.5/ಪಿ2ನ 5 ಸೆಂಟ್ ಪೈಸಾರಿ ಜಾಗದಲ್ಲಿ ಬಿ.ಆರ್.ರಾಜು ಕುಟುಂಬ ಕಳೆದ 40ವರ್ಷಗಳಿಂದ ಜೀವನ ಸಾಗಿಸುತ್ತಿದೆ. ಕಳೆದ 8 ವರ್ಷಗಳಿಂದಲೂ ಈ ಕುಟುಂಬದವರನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಪ್ರಯತ್ನ ಮುಂದುವರಿಸಿದೆ. ಈಗಾಗಲೆ ಫಾರಂ 57 ಸಲ್ಲಿಸಿದ್ದು, ಕಂದಾಯ ಇಲಾಖೆ ನೊಂದ ಕುಟುಂಬಕ್ಕೆ ಹಕ್ಕುಪತ್ರ ನೀಡಬೇಕು. ಇನ್ನು ಮುಂದೆ ಕಂದಾಯ ಇಲಾಖೆ ಕಿರುಕುಳ ಮುಂದುವರಿಸಿದರೆ, ತಾಲೂಕು ಕಚೇರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.

ಕುಶಾಲನಗರ ಸುತ್ತಮುತ್ತ ಶ್ರೀಮಂತರು ಹಾಗೂ ಭೂಮಾಫಿಯ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಹಕ್ಕುಪತ್ರ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಅಕ್ರಮದೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದ ಅವರು, ಬಡ ದಲಿತ ಕುಟುಂಬದ ಮನೆಯನ್ನು ಕೆಡವಿ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.

ನಮ್ಮ ಕುಟುಂಬದ ಮೇಲೆ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರಿಗೂ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ನ್ಯಾಯಸಿಕ್ಕಿಲ್ಲ. ಕಂದಾಯ ಇಲಾಖೆಯ ಕಿರುಕುಳ ನಿಂತಿಲ್ಲ ಎಂದು ಗೋಷ್ಠಿಯಲ್ಲಿದ್ದ ಮಂಜುಳ ರಾಜು ಅಳಲು ತೋಡಿಕೊಂಡರು.

ಪೊಲೀಸರ ಸಹಕಾರದಿಂದ ಕಂದಾಯ ಇಲಾಖೆಯವರು ನಮ್ಮ ಮನೆಯನ್ನು ನೆಲಸಮ ಮಾಡಿದ್ದಾರೆ. ನಮಗೆ ಜೀವ ಭಯವಿದೆ. ರಾತ್ರಿ ವೇಳೆ ಮುಸುಕುಧಾರಿ ಕಿಡಿಗೇಡಿಗಳು ಗುಡಿಸಲಿನತ್ತ ಕಲ್ಲು ತೂರುತ್ತಿದ್ದಾರೆ. ಈ ದೌರ್ಜನ್ಯದ ಹಿಂದೆ ಗ್ರಾ.ಪಂ.ನ ಕೆಲ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ ಎಂದ ಅವರು, ಕಳೆದ 40 ವರ್ಷಗಳಿಂದ ನೆಲೆಸಿರುವ ಜಾಗಕ್ಕೆ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಟಿ.ಈರಯ್ಯ, ಬಿ.ಆರ್.ರಾಜು ಉಪಸ್ಥಿತರಿದ್ದರು.