ಸೋಮವಾರಪೇಟೆ, ಜ.7 : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಜನಸಾಮಾನ್ಯರ ಮೇಲೆ ಅನಗತ್ಯ ತೆರಿಗೆ ವಿಧಿಸುತ್ತಿದೆ. ಇದರೊಂದಿಗೆ ವಿಧಾನಸೌಧದಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದು, ಇಂತಹ ಸರ್ಕಾರವನ್ನು ವಜಾ ಮಾಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಗ್ರಹಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದ್ದರೂ, ರಾಜ್ಯ ಸರ್ಕಾರ ಎರಡೂ ಉತ್ಪನ್ನಗಳ ಮೇಲೆ ಬೆಲೆ ಏರಿಸಿರುವದು ಖಂಡನೀಯ ಎಂದರು.
ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ನೀತಿಯನ್ನೇ ಸರ್ಕಾರ ಅನುಸರಿಸುತ್ತಿದೆ. ರೈತರ ಸಾಲಮನ್ನಾ ಮಾಡುವದಾಗಿ ಘೋಷಿಸಿ ಇಂದಿಗೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆರೋಪಿಸಿದ ಶಾಸಕರು, ಆರ್‍ಟಿಸಿ ಪಡೆಯಲು ಹೆಚ್ಚಿಸಲಾಗಿರುವ ಶುಲ್ಕವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿಧಾನಸೌಧದಲ್ಲೇ ಭ್ರಷ್ಟಾಚಾರ ನಡೆದಿರುವದು ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಸಚಿವರಾದ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಇವರ ಕಚೇರಿ ಸಿಬ್ಬಂದಿ ರೂ. 25.75 ಲಕ್ಷವನ್ನು ಗುತ್ತಿಗೆದಾರರಿಂದ ಕಮಿಷನ್ ಪಡೆಯುವ ಮೂಲಕ ವಿಧಾನ ಸೌಧಕ್ಕೆ ಕಳಂಕ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಕಮಿಷನ್ ದಂಧೆಯಲ್ಲಿ ತೊಡಗಿರುವದು ಇದರಿಂದ ಜಗಜ್ಜಾಹೀರಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸರ್ಕಾರವನ್ನು ವಜಾ ಮಾಡುವ ಮೂಲಕ ಕಮಿಷನ್ ದಂಧೆಯಲ್ಲಿ ತೊಡಗಿರುವ ಪುಟ್ಟರಂಗಶೆಟ್ಟಿ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಸದಸ್ಯ ಕುಶಾಲಪ್ಪ, ಪ.ಪಂ. ಸದಸ್ಯ ಮಹೇಶ್, ನಳಿನಿ ಗಣೇಶ್, ಪ್ರಮುಖರಾದ ಸೋಮೇಶ್, ಸುಮಾ ಸುದೀಪ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ಕಿಬ್ಬೆಟ್ಟ ಮಧು, ಗೌಡಳ್ಳಿ ಸುನಿಲ್, ಭುವನೇಶ್ವರಿ, ಜೆ.ಸಿ. ಶೇಖರ್, ಕೆ.ಕೆ. ಸುಧಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.