*ಗೋಣಿಕೊಪ್ಪಲು, ಜ. 7 : ಸಮಾಜ ಕಲ್ಯಾಣ ಸಚಿವರ ಕಚೇರಿಯಲ್ಲಿನ ಲಂಚ ಹಗರಣವನ್ನು ಖಂಡಿಸಿ ಮತ್ತು ಸಚಿವರ ರಾಜೀನಾಮೆಯನ್ನು ಒತ್ತಾಯಿಸಿ ಇದೇ 9 ರಂದು ಬುಧವಾರ ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ಆಪ್ತ ಶಿಷ್ಯ ಎಂದು ಹೇಳುವ ಸಚಿವ ಪುಟ್ಟರಂಗಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ಹಾಗೂ ಕಚೆÉೀರಿಯ ಟೈಪಿಸ್ಟ್ ಒಬ್ಬ ಸುಮಾರು 26 ಲಕ್ಷ ನಗದು ಹಣವನ್ನು ತನ್ನ ಬ್ಯಾಗಿನಲ್ಲಿ ತುಂಬಿ ಸಾಗಿಸುತ್ತಿದ್ದಾಗ ಪೋಲೀಸರು ಆತನನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ.
ಸಚಿವರ ಕಚೇರಿಯಲ್ಲಿಯೇ ಬಹು ದೊಡ್ಡ ಹಗರಣ ಭ್ರಷ್ಟಾಚಾರ ನಡೆಯುತ್ತಿದ್ದರೂ ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಸರ್ಕಾರ ಮತ್ತು ಕಾಂಗ್ರೆಸ್ ಅವರ ಪಾರದರ್ಶತೆಯನ್ನು ಪ್ರಶ್ನಿಸಬೇಕಾಗಿದೆ. ಇದನ್ನು ಏನು ಅಲ್ಲ ಎಂದು ಹೇಳುತ್ತಿರುವ ದಿನೇಶ್ ಗುಂಡುರಾವ್ ಅವರ ಸಮರ್ಥನೆಯನ್ನು ಇಲ್ಲಿ ಪ್ರಶ್ನಿಸ ಬೇಕಾಗಿದೆ.
26 ಲಕ್ಷ ಅಲ್ಪ ಮೊತ್ತದ ಹಣ ಎಂದು ಹೇಳುವ ಕಾಂಗ್ರೆಸ್ ಅಧ್ಯಕ್ಷರ ನಡೆ ಯಾವ ಮಟ್ಟದ್ದು ಎಂಬುವದು ಸಂಶಯ ಹುಟ್ಟು ಹಾಕುತ್ತದೆ.
ಇದು ಅಲ್ಪ ಮೊತ್ತದ ಹಣ ಎಂದು ಹೇಳುವ ಇವರ ಮಾತಿನಲ್ಲಿ ಅಡಗಿರುವ ಸತ್ಯವಾದರು ಏನು ಎಂಬುದೇ ನಿಗೂಢವಾಗಿದೆ ಎಂದು ಬೋಪಯ್ಯ ಅನುಮಾನಿಸಿದರು.
ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕುಞಂಗಡ ಅರುಣ್ ಬೀಮಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಹಿಂದುಳಿದ ವರ್ಗ ಅಧ್ಯಕ್ಷ ಚಂದ್ರಶೇಖರ್, ತಾಲೂಕು ವರ್ತಕರ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ, ಪೊನ್ನಂಪೇಟೆ ಸ್ಥಾನಿಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಚಿನ್ನಪ್ಪ ಉಪಸ್ಥಿತರಿದ್ದರು.
-ವರದಿ ಎನ್.ಎನ್. ದಿನೇಶ್