ಸಿದ್ದಾಪುರ, ಜ.7: ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಯಾವದೇ ಜಾಗಗಳಿಗೆ ಸಮರ್ಪಕವಾದ ದಾಖಲೆಗಳು ಇಲ್ಲದ ಹಿನೆÀ್ನಲೆಯಲ್ಲಿ ಇದೀಗ ಎಚ್ಚೆತ್ತುಕೊಂಡ ಪಂಚಾಯಿತಿ ಕೊನೆಗೂ ದಾಖಲೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು ನೇತೃತ್ವದಲ್ಲಿ ಸರ್ವೆ ಕಾರ್ಯವನ್ನು ಪ್ರಾರಂಭಿಸಿತು. ಸಿದ್ದಾಪುರ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಹಾಗೂ ಪಟ್ಟಣದ ಇನ್ನಿತರ ಜಾಗಗಳಿಗೆ ಸಮರ್ಪಕವಾದ ದಾಖಲೆಗಳನ್ನು ಪಂಚಾಯಿತಿ ಹೊಂದಿಕೊಳ್ಳದಿರುವ ಬಗ್ಗೆ ಇತೀಚೆಗೆ ‘ಶಕ್ತಿ’ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪಂಚಾಯಿತಿ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿತು.
ಕಳೆದ ಸುಮಾರು ವರ್ಷಗಳಿಂದ ಪಂಚಾಯಿತಿಯ ಸ್ವಾಧೀನದಲ್ಲಿರುವ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಜಾಗಗಳಿದ್ದರೂ, ಅಧಿಕೃತ ದಾಖಲಾತಿಗಳನ್ನು ಹೊಂದಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿತ್ತು. ಇತ್ತೀಚೆಗೆ ಕರಡಿಗೋಡು ರಸ್ತೆಯಲ್ಲಿ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಪತ್ರಕರ್ತರ ಸಂಘ ಹಾಗೂ ಮಹಿಳಾ ಸಂಘಗಳು, ಆದಿ ದ್ರಾವಿಡ ಸಂಘಟನೆಗಳು ಕಟ್ಟಡ ನಿರ್ಮಿಸಲು ಪಂಚಾಯಿತಿಗೆ ಅರ್ಜಿಗಳನ್ನಿ ಸಲ್ಲಿಸಿದ್ದವು. ಈ ವಿಚಾರದ ಬಗ್ಗೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಇದರಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಆಡಳಿತ ಮಂಡಳಿ ಶತಾಯ-ಗತಾಯ ಪ್ರಯತ್ನ ನಡೆಸಿ ಪಂಚಾಯಿತಿಗೆ ಸೇರಿದ ಜಾಗಗಳಿಗೆ ದಾಖಲೆಗಳನ್ನು ಸಿದ್ದ ಪಡಿಸಲು ಸೋಮವಾರದಂದು ಪಟ್ಟಣ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ಮುಖಾಂತರ ನಡೆಸಿತು. ಈ ಸಂದರ್ಭ ಗ್ರಾಮ ಲೆಕ್ಕಿಗ ಸಂತೋಷ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಹಾಜರಿದ್ದರು. -ವಾಸು