ನಾಪೋಕ್ಲು, ಜ. 8: ಕೊಟ್ಟಮುಡಿಯಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಸುಮಾರು ಎರಡು ಕಿ.ಮೀ. ನಷ್ಟು ರಸ್ತೆ ತೀರಾ ಹದಗೆಟ್ಟಿದ್ದು, ಕೊಟ್ಟಮುಡಿ ಸೇತುವೆಯಿಂದ ನಾಪೋಕ್ಲು ಪಟ್ಟಣದವರೆಗೆ ರಸ್ತೆಯೇ ಇಲ್ಲದಂತಾಗಿದೆ. ಗುಂಡಿಗಳಲ್ಲಿ ರಸ್ತೆಯನ್ನು ಹುಡುಕುತ್ತಾ ಚಾಲಕರು ವಾಹನಗಳನ್ನು ಚಲಾಯಿಸಬೇಕಾಗಿದೆ. ಯಾವದೇ ಕಚ್ಚಾರಸ್ತೆಗೆ ಸಡ್ಡು ಹೊಡೆಯುವಂತೆ ಪಟ್ಟಣದ ಈ ಪ್ರಮುಖ ರಸ್ತೆ ಮಾರ್ಪಟ್ಟಿದ್ದು, ವಾಹನ ಸವಾರರು ನಿತ್ಯ ಸರ್ಕಸ್ ಮಾಡುತ್ತಾ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ವರ್ಷ, ವರ್ಷವೂ ಮಳೆಗಾಲ ಸಮೀಪಿಸುವ ಸಂದರ್ಭ ಗುಂಡಿಮುಚ್ಚುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಆದರೆ ಮಳೆಗಾಲದಲ್ಲಿ ರಸ್ತೆಯೆಲ್ಲಾ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವದರಿಂದ ಸರ್ಕಾರದ ಹಣ ಹೊಳೆ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನು ಗುಂಡಿಬಿದ್ದ ರಸ್ತೆಯಲ್ಲಿ ಸಂಬಂಧಿಸಿ ದವರಿಗೆ ಹಿಡಿಶಾಪ ಹಾಕುತ್ತಾ ಸಂಚರಿಸುವ ವಾಹನ ಚಾಲಕರು ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತಗಳನ್ನು ಸಂಭವಿಸುವದನ್ನು ಅಲ್ಲಗಳೆಯುವಂತಿಲ್ಲ.
ಈ ರಸ್ತೆಯಲ್ಲಿ ಒಂದೆರಡು ಬಾರಿ ಸಂಚರಿಸುವ ವಾಹನಗಳು ಸೀದಾ ವರ್ಕ್‍ಶಾಪ್ ಸೇರಿದರೂ ಅಚ್ಚರಿಪಡುವಂತಿಲ್ಲ.
ಕೊಟ್ಟಮುಡಿ ಸೇತುವೆಯಿಂದ ನಾಪೋಕ್ಲು ಪಟ್ಟಣದವರೆಗೆ ವಾಸ್ತವವಾಗಿ ರಸ್ತೆಯೇ ಇಲ್ಲಾ..! ಇದನ್ನು ಮಣ್ಣಿನ ರಸ್ತೆ ಎಂದೇ ಹೇಳಬೇಕು. ರಸ್ತೆ ಅಷ್ಟೊಂದು ಹದಗೆಟ್ಟಿದೆ. ವರ್ಷ, ವರ್ಷವೂ ಗುಂಡಿಮುಚ್ಚುವ ಕೆಲಸ ಮಾಡುತ್ತಾರೆ. ಆದರೆ ಮಳೆಗಾಲದಲ್ಲಿ ಎಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ. ಇತ್ತೀಚಿಗೆ ನಡೆದ ಕೆಡಿಪಿ ಸಭೆಯಲ್ಲಿ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆತ್ತಿಕೊಂಡಿದ್ದರು. ರಸ್ತೆ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳು ಚಕಾರ ಎತ್ತದಿರುವದು ಆಶ್ಚರ್ಯಕ್ಕೆ ಕಾರಣವಾಗಿದೆ. ಇನ್ನು ಹದಿನೈದು ದಿನಗಳ ಒಳಗೆ ರಸ್ತೆಯನ್ನು ದುರಸ್ತಿಪಡಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವದು.
ಕೊಟ್ಟಮುಡಿ ಜಂಕ್ಷನ್‍ನಿಂದ ನಾಪೋಕ್ಲುವರೆಗೆ ರಸ್ತೆ ತೀರಾ ಹದಗೆಟ್ಟಿದ್ದು, ಮಳೆಗಾಲ ಬರುವ ಮುಂಚೆ ಜನರ ಕಣ್ಣೋರೆಸಲು ರಸ್ತೆಗೆ ಡಾಮರು ಹಾಕಿ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತದೆಯಾದರೂ ಮಳೆಗಾಲದ ಸಂದರ್ಭ ಡಾಮರು ಎಲ್ಲಾ ಕೊಚ್ಚಿಕೊಂಡು ಹೋಗಿ ರಸ್ತೆ ಮತ್ತೇ ಅಸ್ಥಿಪಂಜರದಂತೆ ಗೋಚರಿಸುತ್ತದೆ. ಪ್ರತಿವರ್ಷ ಇದೇ ಪುನಾರಾವರ್ತ ನೆಯಾಗುತ್ತಿದ್ದು, ಗುಂಡಿಬಿದ್ದ ರಸ್ತೆಗಳಲ್ಲಿ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆಲ್ಲಾ ಮುಕ್ತಿ ಸಿಗಬೇಕೆಂದರೆ ರಸ್ತೆ ಗುಂಡಿಮುಚ್ಚುವ ಬದಲಿಗೆ ಶಾಶ್ವತವಾಗಿ ಬಾಳಿಕೆ ಬರುವಂತೆ ರಸ್ತೆಯನ್ನು ನಿರ್ಮಿಸಬೇಕಾಗಿದೆ. ಇನ್ನಾದರೂ ಸಂಬಂಧಿಸಿದವರು ರಸ್ತೆ ದುರಸ್ತಿಗೆ ಮುಂದಾಗದಿದ್ದಲ್ಲಿ ಸಾರ್ವಜನಿಕರ ಸಹಕಾರ ದೊಂದಿಗೆ ರಸ್ತೆತಡೆ ನಡೆಸುವ ಮೂಲಕ ಉಗ್ರ ಹೋರಾಟ ನಡೆಸಲಾಗುವದು.
- ಕೆ.ಎ. ಹ್ಯಾರೀಸ್, ಆರ್‍ಟಿಐ ಕಾರ್ಯಕರ್ತ, ನಾಪೋಕ್ಲು.
ಗುಂಡಿ ಬಿದ್ದ ರಸ್ತೆ ಯ ನ್ನು ಸಂಬಂಧಿ ಸಿದವರು ಇನ್ನಾದರೂ ದುರಸ್ತಿಪಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸ ಲಾಗುವದು.
- ಕಿರಣ್ ಕುಮಾರ್, ಪಾಲೂರು ಗ್ರಾಮಸ್ಥ
ತೀರಾ ಹದಗೆಟ್ಟಿರುವ ಈ ರಸ್ತೆಯನ್ನು ಇನ್ನು ಹದಿನೈದು ದಿನಗಳ ಒಳಗೆ ದುರಸ್ತಿಪಡಿಸದಿದ್ದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳ ಲಾಗುವದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
- ದುಗ್ಗಳ ಸದಾನಂದ