ಒಡೆಯನಪುರ, ಜ. 8: ಸಮೂಹ ಮಾದ್ಯಮ ಹಾಗೂ ಯುವ ಸಮೂಹ ಒಗ್ಗೂಡುವಿಕೆಯಿಂದ ಸಮಾಜ ಮತ್ತು ರಾಷ್ಟ್ರವನ್ನು ಮಾದರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಚೆರಿಯಮನೆ ಸುರೇಶ್ ಅಭಿಪ್ರಾಯಪಟ್ಟರು. ಹಂಡ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರಸಂತೆ ಭಾರತಿ ಪ್ರಥಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದ ಸಮೂಹ ಮಾಧ್ಯಮ ಮತ್ತು ಯುವ ಸಮೂಹ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ದಿನದಲ್ಲಿ ಪತ್ರಿಕೆ, ದೃಶ್ಯ ಮಾಧ್ಯಮಗಳು ಖಾಸಗಿ ಒಡೆತನದಲ್ಲಿರುವದರಿಂದ ಸಹಜವಾಗಿ ಪೈಪೋಟಿಗಳಿರುತ್ತವೆ, ಆದರೆ ಈ ಎಲ್ಲಾ ಸಮೂಹ ಮಾಧ್ಯಮಗಳ ಉದ್ದೇಶ ಒಂದೆ ಆಗಿದ್ದು, ಸಮಾಜವನ್ನು ಜಾಗೃತಿ ಗೊಳಿಸುವ ಕಾರ್ಯನಿರ್ವಹಿಸುತ್ತಿವೆ ಎಂದರು. ವಿದ್ಯಾಸಂಸ್ಥೆ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಕಲಿತ ವಿಚಾರಗಳನ್ನು ಕೇವಲ ವಿದ್ಯಾಬ್ಯಾಸ ದಿನÀಗಳವರೆಗೆ ಪಾಲಿಸದೆ ಸದಾ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ನಾಗರಿಕ ಎಸ್.ಕೆ. ವೀರಪ್ಪ, ಹಂಡ್ಲಿ ಗ್ರಾ. ಪಂ. ಅಧ್ಯಕ್ಷ ಹೆಚ್.ಎನ್. ಸಂದೀಪ್ ಮಾತನಾಡಿದರು. ವಿಜಯ್‍ಕುಮಾರ್, ಶಿಬಿರಾಧಿಕಾರಿ ಹೆಚ್.ಎಂ. ವಿವೇಕ್ ಮುಂತಾದವರು ಹಾಜರಿದ್ದರು.