ಮಡಿಕೇರಿ, ಜ. 8: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ 40 ಮಂದಿ ಮಹಿಳೆಯರಿಗೆ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ 40 ಹೊಲಿಗೆ ಯಂತ್ರಗಳನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ವಿತರಿಸಿದರು. ನಗರದ ಕೊಡವ ಸಮಾಜ ಕಟ್ಟಡದಲ್ಲಿ ನಡೆದ ಸರಳ (ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಂಘ-ಸಂಸ್ಥೆಗಳು ನೀಡುವ ನೆರವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ವಿಚಾರ ನನ್ನ ಗಮನಕ್ಕೂ ಬಂದಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಸೇವಾ ಕೇಂದ್ರದ ಪ್ರಮುಖ ಬಿ.ಎಸ್. ತಮ್ಮಯ್ಯ, ಸೇವಾ ಕೇಂದ್ರದ ಮೂಲಕ ಸಂತ್ರಸ್ತ ಗ್ರಾಮಗಳ 9 ಮಂದಿಗೆ ಉದ್ಯೋಗಾವಕಾಶ, 138 ಮಂದಿ ಸಂತ್ರಸ್ತರಿಗೆ 18,91,500 ರೂ. ಪರಿಹಾರ, 75 ಮಂದಿ ವಿದ್ಯಾರ್ಥಿಗಳಿಗೆ 10,20,260 ರೂ. ಶೈಕ್ಷಣಿಕ ನೆರವು, 14 ಸಾವಿರ ರೂ. ಬಸ್ ಪ್ರಯಾಣ ವೆಚ್ಚ ಮತ್ತು 5 ಮಂದಿಗೆ ಕಣ್ಣಿನ ಶಸ್ತ್ರಚಿಕ್ಸಿತೆ ನಡೆಸಲಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಪ್ರತಿನಿಧಿಗಳಾದ ಸುಧೀರ್, ರಾಕೇಶ್, ಕೊಡಗು ಸೇವಾ ಕೇಂದ್ರದ ತಮ್ಮು ಪೂವಯ್ಯ, ಪಪ್ಪು ತಿಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.