ಗೋಣಿಕೊಪ್ಪಲು, ಜ. 8 : ಗಾಂಧಿ ಪಥ ಗ್ರಾಮ ಪಥ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಐದು ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕೇರಿ ಪರಿಶಿಷ್ಟ ಜಾತಿ ಕಾಲೋನಿಯ ಕಾಂಕ್ರಿಟ್ ರಸ್ತೆಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಶಾಸಕರು ರಸ್ತೆಗಳ ಡಾಂಬರೀಕರಣ ಗಳಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ, ವ್ಯವಸ್ಥಿತವಾಗಿ ಕಾಲೋನಿಗಳು ಮುಂದುವರಿಯಲು ಮೂಲಭೂತ ಸೌಲಭ್ಯಗಳು ಒದಗಿಸುವದು ಸರ್ಕಾರದ ಹೊಣೆಯಾಗಿದೆ. ಇದಕ್ಕೆ ಪೂರಕವಾಗಿ ಜನ ಪ್ರತಿನಿಧಿಗಳು ಸ್ಪಂಧಿಸಿದರೆ ದೇಶದ ಪ್ರತಿಯೊಂದು ಗ್ರಾಮಗಳು, ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ.ಪಟ್ಟಣಗಳು ಎಷ್ಟೇ ಮುಂದುವರಿದರು ಹಳ್ಳಿಗಳ ಅಭಿವೃದ್ಧಿಯಾಗದೆ ದೇಶ ಮುಂದುವರಿಯಲು ಸಾಧ್ಯವಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಗ್ರಾಮಗಳನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.

ಹಾತೂರು ಗ್ರಾಪಂ ಅಧ್ಯಕ್ಷೆ ಬಿ.ಎನ್ ಜಯಂತಿ, ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ ಬೋಪಣ್ಣ ತಾ. ಪಂ ಸದಸ್ಯ ಜಯ ಪೂವಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಚಿಯಾಕ್‍ಪೂವಂಡ, ಸುಬ್ರಮಣಿ, ಹಾತೂರು ಗ್ರಾಪಂ ಸದಸ್ಯ ಗಿರೀಶ್ ಪೂವಣ್ಣ್, ಜಮ್ಮುಡ ಕವಿತ, ಹೆಚ್.ಎಸ್ ಮೀರಾ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರಿಯಾ ಮಳವಳ್ಳಿ ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಪ್ರಮುಕರಾದ ಕೊಕ್ಕಂಡ ಕುಶಾ, ಕೊಡೆಂದೆರ ಸುಬ್ಬಯ್ಯ, ಗ್ರಾಪಂ ಮಾಜಿ ಸದಸ್ಯ ಮುತ್ತಮ್ಮ, ಮಲ್ಲಂಡ ಮಧು ದೇವಯ್ಯ, ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.