ಮಡಿಕೇರಿ, ಜ. 8: ಐತಿಹಾಸಿಕ ಮಡಿಕೇರಿ ಕೋಟೆಯಲ್ಲಿ ಇಂದು ಕೇರಳದ ಕಣ್ಣೂರು ಜಿಲ್ಲೆ ಉಳಿಕಲ್‍ನ ಬೈತೂರಪ್ಪ ಸನ್ನಿಧಿಯ ದರ್ಶನಪಾತ್ರಿ ಕೋಮರತಚ್ಚನ್ ಕಾಣಿಸಿಕೊಂಡು ಜನತೆಯಲ್ಲಿ ಅಚ್ಚರಿಗೆ ಕಾರಣವಾಯಿತು. ರಾಜಪರಂಪರೆ ಆಳ್ವಿಕೆಯ ದಿನಗಳಲ್ಲಿ ಬೈತೂರಪ್ಪ ಕ್ಷೇತ್ರದಿಂದ ಅರಮನೆಗೆ ಆಗಮಿಸುತ್ತಿದ್ದ ಕೋಮರತಚ್ಚ (ನ್) ಇಲ್ಲಿಗೆ ಆಗಮಿಸಿ ಕೋಟೆಯಲ್ಲಿ ರಾಜಮರ್ಯಾದೆಯೊಂದಿಗೆ ಖಜಾನೆಯಿಂದ ಕಾಣಿಕೆ ಪಡೆದು ಹರಸುವದು ರೂಢಿಯಿತ್ತು.(ಮೊದಲ ಪುಟದಿಂದ) ಅಂತೆಯೇ ಈ ವರ್ಷ ಅಲ್ಲಿಂದ ಪುಗ್ಗೆರ ಕುಟುಂಬದ ತಕ್ಕಮುಖ್ಯಸ್ಥರೊಂದಿಗೆ ಇಲ್ಲಿಗೆ ಆಗಮಿಸಿದ ಕೋಮರತಚ್ಚ ಕೋಟೆ ಸಂದರ್ಶಿಸಿ, ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿಯೊಂದಿಗೆ ವಿಶೇಷ ಪೂಜೆ ಸ್ವೀಕರಿಸಿ, ಜಿಲ್ಲಾ ಆಡಳಿತ ಭವನಕ್ಕೆ ಧಾವಿಸಿತು. ಅಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಕೋಮರತಚ್ಚ ಇತಿಹಾಸ ಕುರಿತು ಪುಗ್ಗೇರ ಕುಟುಂಬದ ತಕ್ಕಮುಖ್ಯಸ್ಥರು ಬೈತೂರಪ್ಪ ದೇವಾಲಯದ ವಿಶ್ವಸ್ಥರಾದ ಪುಗ್ಗೇರ ಪೊನ್ನಪ್ಪ ಹಾಗೂ ಇತರರು ವಾರ್ಷಿಕ ಉತ್ಸವಕ್ಕೆ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಿದರು.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ಎದುರಾಗಿರುವ ಕಷ್ಟನಷ್ಟಗಳನ್ನು ದೂರಗೊಳಿಸುವಲ್ಲಿ ದೈವಜ್ಞರ ಅಣತಿಯಂತೆ ಪುರಾತನ ಪದ್ಧತಿ ಮುಂದುವರೆಸಿಕೊಂಡು ಬಂದಿರುವದಾಗಿ ಈ ವೇಳೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಪ್ರಮುಖರು ನೆನಪಿಸಿದರು. ಅಲ್ಲದೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೈವಿಕ ಪರಂಪರೆ ಮುಂದುವರಿಸಿಕೊಂಡು ಬಂದಿರುವದು ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು. ಈ ವೇಳೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮತ್ತಿತರರು ಕೋಮರತಚ್ಚನ ಆಶೀರ್ವಾದ ಪಡೆದರು.

ಪುಗ್ಗೇರ ಪೊನ್ನಪ್ಪ ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡುತ್ತಾ, ಅನೇಕ ವರ್ಷಗಳ ಬಳಿಕ ಕೋಮರತಚ್ಚ ಮಡಿಕೇರಿಗೆ ಭೇಟಿ ನೀಡಿದ್ದು, ತುಂಬಾ ಸಂತೋಷವಾಗಿದ್ದು, ತಾ. 23 ರಿಂದ 26ರ ತನಕ ಬೈತೂರಿನಲ್ಲಿ ಜರುಗಲಿರುವ ವಾರ್ಷಿಕೋತ್ಸವಕ್ಕೆ ಕೊಡಗಿನ ಭಕ್ತರು ಭಾಗವಹಿಸಿ ದೇವರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕರೆ ನೀಡಿದರು.

ಕ್ಷೇತ್ರದಲ್ಲಿ ಪ್ರಶ್ನೆ ವೇಳೆ ಪ್ರಾಕೃತಿಕ ವಿಕೋಪಕ್ಕೆ ದೈವಿಕ ಪದ್ಧತಿಗಳನ್ನು ಮರೆತಿರುವದೂ ಒಂದು ಕಾಣರವೆಂದು ಲಭಿಸಿರುವ ಮಾಹಿತಿ ಮೇರೆಗೆ, ಈ ವರ್ಷದಿಂದ ಹಿಂದಿನ ಪರಂಪರೆ ಮುಂದುವರೆಸುತ್ತಾ, ದೇವರ ಕೈಂಕರ್ಯ ನಿಲ್ಲಿಸದಂತೆ ಕಾಳಜಿ ವಹಿಸಲು ತೀರ್ಮಾನಿಸಿರುವದಾಗಿ ಅಭಿಪ್ರಾಯಪಟ್ಟರು.