ಕುಶಾಲನಗರ, ಜ. 6: ಇಲ್ಲಿಗೆ ಸಮೀಪದ ಹೊಸಪಟ್ಟಣದಲ್ಲಿ ಗ್ರಾಮದ ಪ್ರಗತಿ ಪರ ಕೃಷಿಕ ಪಟೇಲ್ ಕುಟುಂಬದ ಎಚ್.ಬಿ.ಶಿವಕುಮಾರ್ ಎಂಬವರ ಸ್ಮರಣಾರ್ಥ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗಿತು.

ಶಿವಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ, ಆತ್ಮನ ಕರೆಗೆ ನಾವುಗಳು ದಿನೇ ದಿನೇ ಸಿದ್ದರಾಗಬೇಕಿದೆ. ಬದುಕಿರುವ ತನಕ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಮಾಡುವ ಕಾಯಕ ದಲ್ಲಿಯೇ ಸ್ವರ್ಗವನ್ನು ಕಾಣಬೇಕೆಂದು ಕರೆಕೊಟ್ಟರು.

ಅರಮೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬದುಕಿನ ಮಾರ್ಗದಲ್ಲಿ ಹುಟ್ಟು ಮತ್ತು ಸಾವಿನ ನಡುವಿನ ಅವಧಿಯಲ್ಲಿ ಜನಮಾನಸದಲ್ಲಿ ಒಳ್ಳೆಯ ಹೆಜ್ಜೆಗಳಿಟ್ಟವರ ಬಗ್ಗೆ ಸಮಾಜ ನೋವು ಮತ್ತು ಬೇಸರವನ್ನು ವ್ಯಕ್ತಪಡಿಸುತ್ತದೆ. ಮನುಷ್ಯ ತನ್ನನ್ನು ತಾನರಿತು ಉದಾತ್ತವಾದ ಸೇವೆಗೈವ ಮೂಲಕ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿವ ಕೆಲಸ ಮಾಡಬೇಕು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬಂತೆ ನಾವು ಏನು ಮಾಡುತ್ತೇವೆಯೋ ಅದನ್ನು ನಾವೇ ಅನುಭವಿಸುತ್ತೇವೆ. ಒಳಿತನ್ನು ಮಾಡುವ ಮೂಲಕ ಶಿವಕುಮಾರ್ ಅವರ ರೀತಿ ಬದುಕಬೇಕೆಂದು ಶ್ರೀಗಳು ಕರೆಕೊಟ್ಟರು.

ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಸುಂಟಿಕೊಪ್ಪ ಮದರಸಾದ ಗುರುಗಳಾದ ಅಬ್ದುಲ್ ಖಾದರ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ದುಬಾರೆಯ ಕೆ.ಎಸ್.ರತೀಶ್, ವಚನ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಬಾಳುಪೇಟೆಯ ಕಾಫಿ ಬೆಳೆಗಾರ ಗುರುಬಸಪ್ಪ ಮೊದಲಾದವರಿದ್ದರು.