ಸೋಮವಾರಪೇಟೆ,ಜ.6: ಗ್ರಾಮೀಣ ಭಾಗಗಳ ರಸ್ತೆಗಳನ್ನು ಸಂಚಾರಕ್ಕೆ ಯೋಗ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅನುದಾನದಡಿ ಕೈಗೊಳ್ಳಲಾಗಿರುವ ರಸ್ತೆ ಕಾಮಗಾರಿ ಅಂದಾಜು ಪಟ್ಟಿಯಂತೆ ನಡೆಯದೇ ಇರುವದು ಕಂಡುಬಂದಿದೆ.

ಅಭಿಯಂತರ ಹಾಗೂ ಗುತ್ತಿಗೆದಾರರ ‘ಅಡ್ಜೆಸ್‍ಮೆಂಟ್’ ಗಳಿಂದ ಜನರ ತೆರಿಗೆ ಹಣದಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳ ಲಾಗುವ ಕಾಮಗಾರಿಗಳು ಕಳಪೆ ಯಾಗುತ್ತಿದ್ದು, ಕೆಲವರ ಜೇಬು ತುಂಬುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕಳೆದ 2016-17ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅನುದಾನದಡಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿಯಲ್ಲಿ ನಿರ್ವಹಿಸಿರುವ ಕಾಮಗಾರಿ ಅಂದಾಜು ಪಟ್ಟಿಗಿಂತ ಭಿನ್ನವಾಗಿರು ವದು ಗೋಚರಿಸಲ್ಪಟ್ಟಿದೆ.

ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 7 ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟಾರೆ 45 ಲಕ್ಷಗಳಿಗೆ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಯನ್ನು ಪಡೆಯಲಾಗಿದ್ದು, ದೊರೆ ಲಿಂಗರಾಜು ಮನೆ ರಸ್ತೆಯ ಡಾಂಬರೀಕರಣವನ್ನು ಹೊರತುಪಡಿಸಿದರೆ ಉಳಿದಂತೆ 6 ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ಒಪ್ಪಿಗೆ ಪಡೆಯಲಾಗಿದೆ.

ಅದರಂತೆ ಬೀದಳ್ಳಿ ಗ್ರಾಮದ ತಮ್ಮಯ್ಯ ಅವರ ಮನೆಗೆ ತೆರಳುವ ರಸ್ತೆಯನ್ನು ಕಾಂಕ್ರಿಟೀಕರಣ ಗೊಳಿಸಲಾಗಿದ್ದು, ನಿರ್ವಹಿಸಲ್ಪಟ್ಟ 1 ವರ್ಷದಲ್ಲೇ ರಸ್ತೆಯ ಮೇಲ್ಪದರ ಕಿತ್ತು ಬರುತ್ತಿದ್ದು, ಕಳಪೆ ಗುಣಮಟ್ಟದ ಕಾಮಗಾರಿಗೆ ಕನ್ನಡಿಯಂತಿದೆ.

ಇದರೊಂದಿಗೆ ಅಂದಾಜು ಪಟ್ಟಿಯಲ್ಲಿ 160 ಮೀಟರ್ ಉದ್ದ ಎಂದು ನಮೂದಿಸಲಾಗಿದ್ದು, ಅಳತೆಯ ಟೇಪು ಹಿಡಿದು ಅಳೆದರೂ ಸಹ 120 ಮೀಟರ್ ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಉಳಿದ 40 ಮೀಟರ್ ರಸ್ತೆಯನ್ನು ಅಭಿಯಂತರ ಮತ್ತು ಗುತ್ತಿಗೆದಾರನೇ ಕಂಡುಹಿಡಿಯಬೇಕಿದೆ.

ಇದೇ ರಸ್ತೆಯನ್ನು 3 ಮೀಟರ್ ಅಗಲದಲ್ಲಿ ನಿರ್ಮಿಸಬೇಕಿದ್ದು, ರಸ್ತೆಯ ಶೇ.60 ಭಾಗದಲ್ಲಿ 2.5 ಮೀಟರ್ ಮಾತ್ರ ಅಗಲವಿದೆ. ಉದ್ದದಲ್ಲಿ 40 ಮೀಟರ್ ನುಂಗಿರುವವರು ಅಗಲದಲ್ಲೂ ಅರ್ಧ ಮೀಟರ್ ನುಂಗಿದ್ದಾರೆ. ರಸ್ತೆಗೆ 6 ಇಂಚಿನಷ್ಟು ಎತ್ತರದಲ್ಲಿ ವೆಟ್‍ಮಿಕ್ಸ್ ಮತ್ತು ಅದರ ಮೇಲೆ ಕಾಂಕ್ರೀಟ್ ಹಾಕಬೇಕಿದ್ದರೂ, ಹಲವು ಕಡೆಗಳಲ್ಲಿ 5 ಇಂಚಿನಷ್ಟು ಮಾತ್ರ ಕಾಂಕ್ರೀಟ್ ಕಂಡುಬಂದಿದೆ. ಉಳಿದೆಡೆ ಇದರ ಎತ್ತರ ಇನ್ನೂ ಕಡಿಮೆಯಿದೆ.

ಜೊತೆಗೆ ರಸ್ತೆಯ ಎರಡೂ ಬದಿ ಕಾಡು ಕಡಿದು, ಗಿಡಗಂಟಿಗಳನ್ನು ತೆರವುಗೊಳಿಸುವದು, ರಸ್ತೆಯ ಇಕ್ಕೆಲಗಳಲ್ಲಿ (ಶೋಲ್ಡರ್ಸ್) ಗ್ರಾವೆಲ್ ಮಣ್ಣು ಹಾಕಿ ಸಮತಟ್ಟು ಗೊಳಿಸುವದು, ಚರಂಡಿ ನಿರ್ಮಿಸುವ ಕೆಲಸಗಳು ಇಲ್ಲಿ ನಡೆದೇ ಇಲ್ಲ. ಈ ಹಿಂದೆ ಇದ್ದ ರಸ್ತೆಯ ಮೇಲ್ಪದರ ತೆಗೆದು, ಗಟ್ಟಿಮಣ್ಣು ಸಿಕ್ಕ ನಂತರ ವೆಟ್‍ಮಿಕ್ಸ್ ಹಾಕಿ ರೋಲರ್ ಓಡಿಸಿ ಅದರ ಮೇಲೆ ಕಾಂಕ್ರೀಟ್ ಹಾಕಬೇಕೆಂಬ ನಿಯಮ ವಿದ್ದರೂ ಬೀದಳ್ಳಿಯ ಈ ರಸ್ತೆಗೆ ರೋಲರ್ ಇಳಿದೇ ಇಲ್ಲ.

ಪರಿಣಾಮ ಮುಕ್ತಾಯಗೊಂಡ ಒಂದು ವರ್ಷದಲ್ಲೇ ಕಾಂಕ್ರೀಟ್ ರಸ್ತೆಯ ಕೆಲ ಭಾಗಗಳಲ್ಲಿ ಜಲ್ಲಿಕಲ್ಲುಗಳು ಕಿತ್ತುಬರುತ್ತಿವೆ. ರಸ್ತೆಯ 2 ವರ್ಷಗಳ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರನ ಮೇಲಿದ್ದರೂ ಸಹ ಅಂದಾಜುಪಟ್ಟಿ ಯಂತೆ ಕೆಲಸ ಮಾಡದೇ ಉದ್ದ ಮತ್ತು ಅಗಲದಲ್ಲಿ ಕಡಿಮೆ ಮಾಡಿರುವದನ್ನು ಪ್ರಶ್ನಿಸುವವರು ಯಾರು ಎಂಬ ಪ್ರಶ್ನೆ ಎದ್ದಿದೆ.

ಈ ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಅಭಿಯಂತರರು ಒಮ್ಮೆಯೂ ಭೇಟಿ ನೀಡಿಲ್ಲ. ಪೂರ್ಣಗೊಂಡ ನಂತರ ಬಂದು ಅಳತೆ ಮಾಡಿ ತೆರಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ದ್ದಾರೆ. ಒಟ್ಟಾರೆ ಅಭಿಯಂತರ ಮತ್ತು ಗುತ್ತಿಗೆದಾರರ ನಡುವಿನ ಅಡ್ಜೆಸ್ ಮೆಂಟ್‍ನಿಂದಾಗಿ ರಸ್ತೆಯ ಅಗಲದಲ್ಲಿ ಅರ್ಧ ಮೀಟರ್, ಉದ್ದದಲ್ಲಿ 40 ಮೀಟರ್ ಕಣ್ಮರೆ ಯಾಗಿರುವದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಿಸಿದ ಲೋಕೋಪ ಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸ ಬೇಕೆಂದು ಸ್ಥಳೀಯರು ಒತ್ತಾ ಯಿಸಿದ್ದು, ತಪ್ಪಿದಲ್ಲಿ ಕಚೇರಿ ಎದುರು ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ನೀಡಿದ್ದಾರೆ. - ವಿಜಯ್ ಹಾನಗಲ್