ಸೋಮವಾರಪೇಟೆ, ಜ.6: ಕರ್ನಾಟಕ ಟೈಲರ್ಸ್ ಅಸೋಸಿಯೇಷನ್‍ನ ಸೋಮವಾರಪೇಟೆ ಕ್ಷೇತ್ರ ಸಮಿತಿ ಸಭೆ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಟೈಲರ್ಸ್ ಅಸೋಸಿಯೇಷನ್‍ನ ಗೌರವಾಧ್ಯಕ್ಷ ಬಿ.ಎನ್. ಮಂಜುನಾಥ್ ವಹಿಸಿದ್ದರು. ನಂತರ ಮಾತನಾಡಿದ ಅವರು, ಸಂಘದ ಸದಸ್ಯರು ಸಂಘಟಿತರಾಗುವದರೊಂದಿಗೆ ಕಾರ್ಯಕ್ರಮಗಳಿಗೆ ಉತ್ತಮ ಸಹಕಾರ ನೀಡಿದಲ್ಲಿ ಸಂಘದ ಬೆಳವಣಿಗೆ ಸಾಧ್ಯ. ಇಂದು ಮಹಿಳಾ ಟೈಲರ್‍ಗಳ ಸಂಖ್ಯೆ ಹೆಚ್ಚಿದ್ದು, ಸಂಘಟನೆಗಳ ಕಾರ್ಯ ಚಟುವಟಿಕೆಗಳಲ್ಲಿ ಇವರ ಪಾತ್ರ ಹೆಚ್ಚು ಕಂಡುಬರುತ್ತಿದೆ ಎಂದರು.

ಕಳೆದ ಹಲವು ವರ್ಷಗಳಿಂದ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದು, ಅದಕ್ಕಾಗಿ ಹಲವು ಹೋರಾಟಗಳನ್ನು ಮಾಡಲಾಗಿದ್ದರೂ ಯಶಸ್ವಿಯಾಗಿಲ್ಲ. ಸಂಘಟನೆಯ ಕೊರತೆಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಸಲಹೆ ನೀಡಿದರು. ಪ್ರಾಕೃತಿಕ ವಿಕೋಪದಿಂದ ಹಲವಷ್ಟು ಟೈಲರ್ ಕುಟುಂಬಗಳ ಬದುಕು ಬೀದಿಗೆ ಬಿದ್ದಿದ್ದು, ಸದಸ್ಯರ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ರಾಜ್ಯ ಸಂಘದ ಸಹಕಾರದೊಂದಿಗೆ ರೂ. 8.5 ಲಕ್ಷವನ್ನು ಸಂಗ್ರಹಿಸಿ ಸದಸ್ಯರಿಗೆ ವಿತರಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸಿ. ನಂದೀಶ್ ಮಾತನಾಡಿ, ಅಸಂಘಟಿತ ವಲಯದಲ್ಲಿ ಟೈಲರ್ಸ್ ವೃತ್ತಿ ಬಾಂಧವರಿದ್ದಾರೆ. ಸಂಘದ ಸದಸ್ಯರಿಗೆ ವಿವಿಧ ರೀತಿಯ ಹಣಕಾಸಿನ ನೆರವನ್ನು ನೀಡಲು ರಾಜ್ಯ ಸಂಘವನ್ನು ಮನವಿ ಮಾಡಲಾಗಿದೆ. ಸರ್ಕಾರ ಇಂದು ಎಲ್ಲ ಸೌಲಭ್ಯಗಳನ್ನು ಸ್ಮಾರ್ಟ್ ಕಾರ್ಡ್‍ಗಳ ಮೂಲಕ ನೀಡುತ್ತಿದ್ದು, ಸೌಲಭ್ಯಕ್ಕಾಗಿ ಎಲ್ಲ ಸದಸ್ಯರು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹೊಸೊಕ್ಲು ನಿಂಗಪ್ಪ, ಖಜಾಂಚಿ ಬಿ.ಎಸ್. ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಜಯರಾಂ, ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಧರ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.