ಮಡಿಕೇರಿ, ಜ. 6: ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಕಲಾ ಶಾಲೆಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ‘ನೃತ್ಯ ವೈಭವ’ ರಾಜ್ಯಮಟ್ಟದ ನೃತ್ಯ ಸ್ಪರ್ಧಾ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಇಲ್ಲಿನ ಕಾವೇರಿ ಹಾಲ್‍ನಲ್ಲಿ ಆಯೋಜಿತಗೊಂಡಿದ್ದ ನೃತ್ಯ ವೈಭವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 18 ನೃತ್ಯ ತಂಡಗಳ ಕಾರ್ಯಕ್ರಮವನ್ನು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಉದ್ಘಾಟಿಸಿದರು. ಕಲೆಗಳ ಬೀಡಾಗಿರುವ ಕೊಡಗಿನಲ್ಲಿ ಇಂತಹ ಕಲಾ ಸಂಸ್ಥೆಗಳ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವದು ಶ್ಲಾಘನೀಯ. ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಲಿ ಎಂದು ಅವರು ಹಾರೈಸಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅವರು ಅದೆಷ್ಟೋ ಎಲೆಮರೆಯಂತಿರುವ ಪ್ರತಿಭೆಗಳು ಹಾಗೆಯೇ ಉಳಿದುಕೊಳ್ಳುತ್ತಿವೆ. ಅಂತವರುಗಳಿಗೆ ವೇದಿಕೆ ಅವಕಾಶ ಕಲ್ಪಿಸುವ ಜವಾಬ್ದಾರಿ ಇಂತಹ ಕಲಾ ಸಂಸ್ಥೆಗಳಿಗಿದೆ ಎಂದು ಹೇಳಿದರು.
ಕಿಂಗ್ಸ್ ಆಫ್ ಕೂರ್ಗ್‍ನ ಪೋಷಕ ವಿನೋದ್ ಕರ್ಕೆರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸಂಸ್ಥೆಯ ಸ್ಥಾಪಕ ಮಹೇಶ್ ಮೂರ್ತಿ, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪೋಷಕರಾದ ಸವಿತಾ ಅರುಣ್, ಬಿ.ವಿ. ರೋಷನ್ ಇದ್ದರು.
ವಿಜೇತರು: ಒಟ್ಟು 18 ತಂಡಗಳು ಭಾಗವಹಿಸಿದ್ದ ನೃತ್ಯ ವೈಭವದಲ್ಲಿ ಪರ್ಲ್ ಮಂಗಳೂರು ಪ್ರಥಮ ಸ್ಥಾನ ಪಡೆದುಕೊಂಡರೆ, ಸಂಸ್ಕøತಿ ಸೌರಭ ತಂಡ ದ್ವಿತೀಯ ಸ್ಥಾನ ಹಾಗೂ ಪುತ್ತೂರಿನ ಮುರಳಿ ಬ್ರದರ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡವು. ಬೆಂಗಳೂರಿನ ಎಕ್ಸ್ಟ್ರೀಮ್ ನಾಲ್ಕನೇ ಹಾಗೂ ಪುತ್ತೂರಿನ ಸ್ಟೆಪ್‍ಅಪ್ ಮೈಕಲ್ಸ್ ತಂಡ ಐದನೇ ಸ್ಥಾನ ಪಡೆದುಕೊಂಡವು. ಇದರೊಂದಿಗೆ ಜಿ ಕನ್ನಡ ವಾಹಿನಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ತುಷಾರ್ ಗೌಡ, ಮಹೇಂದ್ರ ಪ್ರಸಾದ್, ತೇಜಸ್ವಿನಿ ಹಾಗೂ ಮಾಸ್ಟರ್ ಡ್ಯಾನ್ಸರ್ ವಿಜೇತೆ ಸುಳ್ಯದ ಮೊನಿಷಾ, ಪುಟ್ಟಗೌರಿ ಮದುವೆ ಧಾರಾವಾಹಿಯ ನಾಯಕಿ ರಂಜನಿ ಅವರುಗಳು ವೇದಿಕೆ ಮೇಲೇರಿ ಅಭಿನಯ, ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮುಖ್ಯ ತೀರ್ಪುಗಾರರಾಗಿ ವಿದ್ವಾನ್ ಮಾದಾಪುರದ ಬಿ.ಸಿ. ಶಂಕರಯ್ಯ, ಹಾಸನದ ನೃತ್ಯ ತರಬೇತುದಾರರಾದ ಆಶಾ ಭಂಡಾರಿ, ಬೆಂಗಳೂರಿನಲ್ಲಿರುವ ನೃತ್ಯಪಟು ಡ್ಯಾನಿ ಗಣಪತಿ, ಇವರೊಂದಿಗೆ ಜೂಡಿ ಮೆಂಬರ್ಸ್‍ಗಳಾಗಿ ಮಡಿಕೇರಿಯ ನೃತ್ಯ ತರಬೇತುದಾರರಾದ ಭಾರತಿ ರಮೇಶ್, ಫೀ.ಮಾ. ಕಾರ್ಯಪ್ಪ ಕಾಲೇಜು ನೃತ್ಯ ಶಿಕ್ಷಕಿ ತೇಜಸ್ವಿನಿ ಶೆಟ್ಟಿ, ಚೇರಂಬಾಣೆಯ ನೃತ್ಯ ಶಿಕ್ಷಕಿ ತೇಲಪಂಡ ಶರಿನ್ ನಂಜಪ್ಪ, ಬೆಂಗಳೂರಿನ ನೃತ್ಯ ಪಟು ಮಾಧುರ್ಯ, ಸುಳ್ಯದ ನೃತ್ಯ ತರಬೇತುದಾರ ಅಭಿಕುಲಾಲ್ ಕಾರ್ಯನಿರ್ವಹಿಸಿದರು.
ಕಿಂಗ್ಸ್ ಆಫ್ ಕೂರ್ಗ್‍ನ ಆರ್.ಬಿ. ರವಿ, ಎಂ.ಎಸ್. ವಿನಯ್ ಹಾಗೂ ಮಂಗಳೂರಿನ ಕಲಾವಿದೆ ಸಹನಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರೆ, ಮಡಿಕೇರಿಯ ಸ್ನೇಹ, ಸಪ್ನ ಸಹೋದರಿಯರು ಪ್ರಾರ್ಥಿಸಿದರು. ಕುಡೆಕಲ್ ಸಂತೋಷ್ ವಂದಿಸಿದರು.