ಕುಶಾಲನಗರ, ಜ. 6: ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕುಲಶಾಸ್ತ್ರ ಅಧ್ಯಯನ ಸಮೀಕ್ಷೆಗೆ ಕೊಡವ ಜನಾಂಗದವರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾರಣಕರ್ತ ರಾಗಬೇಕೆಂದು ಕೊಡವ ಸಮಾಜದ ಪ್ರಮುಖರು ಕರೆ ನೀಡಿದ್ದಾರೆ.
ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೊರ್ಮೆ ಸಂತೋಷಕೂಟದಲ್ಲಿ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ, ಕೊಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಮಾಜಗಳ ಎಲ್ಲಾ ಪ್ರಮುಖರು ಕೈಜೋಡಿಸಬೇಕು. ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವದು ಪೋಷಕರು, ಹಿರಿಯರ ಆದ್ಯ ಜವಾಬ್ದಾರಿಯಾಗಿದೆ. ಕೌಟುಂಬಿಕ ಸಮಸ್ಯೆಗಳ ನಿವಾರಣೆಗೆ ತಮ್ಮತಮ್ಮಲ್ಲಿ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದು ಅವರು ಕರೆ ನೀಡಿದರು. ಕೊಡವ ಬುಡಕಟ್ಟು ಸ್ಥಾನಮಾನದ ಅಧ್ಯಯನ ಸಮೀಕ್ಷೆ ನಿಟ್ಟಿನಲ್ಲಿ ಬೆಂಗಳೂರಿನ ಕೊಡವ ಸಮಾಜ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ ಎಂದರು.
ಬಡ ಮಕ್ಕಳ ಕುಟುಂಬದ ಬಗ್ಗೆ ಮಾಹಿತಿ ಕಲೆಹಾಕಿ ಅವರ ಕ್ಷೇಮಾಭಿವೃದ್ಧಿ ಬಗ್ಗೆ ಸಮಾಜಗಳು ಚಿಂತನೆ ಹರಿಸಬೇಕು ಎಂದ ಎಂ.ಟಿ.ನಾಣಯ್ಯ ಅವರು, ಕೊಡಗು ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಈಗಾಗಲೆ ಸಮಾಜ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಸಹಕರಿಸುವ ಸಂಬಂಧ ಪೂರ್ವ ಸಿದ್ದತೆ ನಡೆದಿದೆ ಎಂದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಐಟಿಸಿ ಕಂಪನಿಯ ನಿವೃತ್ತ ಹಿರಿಯ ಉಪಾಧ್ಯಕ್ಷ ಕಂಬೇಯಂಡ ಸುನಿಲ್ ಬಿದ್ದಪ್ಪ ಮಾತನಾಡಿ, ಕೊಡವ ಸಮುದಾಯದ ಯುವಪೀಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಉದ್ಯೋಗವಕಾಶ ಪಡೆಯುವ ನಿಟ್ಟಿನಲ್ಲಿ ಸಮಾಜದ ಪಾತ್ರ ಪ್ರಮುಖವಾಗಿದೆ. ಪೈಪೋಟಿಯ ಯುಗದಲ್ಲಿ ಕಷ್ಟಪಟ್ಟು ಸಂಪಾದನೆ ಮೂಲಕ ಎಲ್ಲರೂ ಏಳಿಗೆ ಕಾಣುವಂತಾಗಬೇಕು ಎಂದ ಅವರು, ಕೊಡವ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆಗೆ ಸಂಪೂರ್ಣ ಮಾಹಿತಿ ಒದಗಿಸಬೇಕಾಗಿದೆ ಎಂದರು. ಆ ಮೂಲಕ ಮುಂದಿನ ಪೀಳಿಗೆಯ ಏಳಿಗೆಗೆ ಕಟಿಬದ್ದರಾಗುವಂತೆ ಕರೆ ನೀಡಿದರು.
ಪ್ರತಿಯೊಬ್ಬರಿಗೂ ಭಾಷಾಭಿಮಾನ ಮುಖ್ಯವಾಗಬೇಕಾಗಿದ್ದು ಮನೆ ಭಾಷೆಗೆ ಒತ್ತು ನೀಡುವದು ಯುವಪೀಳಿಗೆಯ ಆದ್ಯ ಜವಾಬ್ದಾರಿಯಾಗಿದೆ. ಈ ಮೂಲಕ ಕೊಡವ ಸಮುದಾಯದ ಸಮಗ್ರ ಅಭಿವೃದ್ದಿ ಸಾಧ್ಯ ಎಂದರು.
ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಜಮ್ಮಾಬಾಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯ ಬೇಕಾಗಿದೆ. ಕೋವಿ ಮತ್ತಿತರ ಆಯುಧಗಳ ಬಹಿರಂಗ ಪ್ರದರ್ಶ&divound; Àವಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗಿದೆ. ದುರುಪ ಯೋಗ ಮಾಡಿಕೊಂಡಲ್ಲಿ ಸೌಲಭ್ಯ ವಂಚಿತರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ ಅವರು, ಒಗ್ಗಟ್ಟಿನ ಮೂಲಕ ಸಮುದಾಯದ ಏಳಿಗೆ ಸಾಧ್ಯ ಎಂದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೊಂಗಂಡ ಎಸ್.ದೇವಯ್ಯ, ವೀರಾಜಪೇಟೆ ಅಧ್ಯಕ್ಷ ವಾಂಚಿರ ನಾಣಯ್ಯ, ಪೊನ್ನಂಪೇಟೆ ಸಮಾಜದ ಚೊಟ್ಟೆಕ್‍ಮಾಡ ರಾಜೀವ್ ಅಪ್ಪಯ್ಯ, ಅಮ್ಮತ್ತಿಯ ಅಧ್ಯಕ್ಷ ಮೂಕೊಂಡ ಬೋಸ್ ಮಂದಣ್ಣ, ಗೋಣಿಕೊಪ್ಪದ ಚಕ್ಕೆರ ಸೋಮಯ್ಯ, ಗರ್ವಾಲೆ ಅಧ್ಯಕ್ಷ ಸರ್ಕಂಡ ಗಣಪತಿ, ಮಕ್ಕಂದೂರು ಅಧ್ಯಕ್ಷ ನಾಪಂಡ ರವಿಕಾಳಪ್ಪ, ಸುಂಟಿಕೊಪ್ಪದ ಚೇಂದ್ರಿಮಾಡ ಎ ಕರುಂಬಯ್ಯ, ಸಕಲೇಶಪುರದ ನಿಡುಮಂಡ ಎಸ್. ವಿಠಲ, ಸಮಿತಿಯ ಉಪಾಧ್ಯಕ್ಷರಾದ ಅಯಿಲಪಂಡ ಮಂದಣ್ಣ, ಮಾಜಿ ಅಧ್ಯಕ್ಷರಾದ ಮೇವಡ ಚಿಂಗಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ, ಜೆಮ್ಸಿ ಪೊನ್ನಪ್ಪ, ಬಾಚರಣಿಯಂಡ ಅಪ್ಪಣ್ಣ, ಕುಶಾಲನಗರ ಕೊಡವ ಸಮಾಜದ ನಿರ್ದೇಶಕರು, ಮತ್ತಿತರ ಪ್ರಮುಖರು ಇದ್ದರು.
ಕಾರ್ಯಕ್ರಮದಲ್ಲಿ 2017-18ನೇ ಸಾಲಿನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಹಣ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಕೊಡವ ನೃತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಸ್ವಾಗತಿಸಿದರು, ಎಲ್ತಂಡ ರಂಜಿತ್, ಉಡುವೆರ ಹರ್ಷಿತ್ ಚಿಟ್ಟಿಯಪ್ಪ, ಬಿ.ಕೆ.ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು.