ಶನಿವಾರಸಂತೆ, ಜ. 6: ಸರಕಾರಿ ಶಾಲೆಯ ಮಕ್ಕಳಿಗೆ ಇಂಗ್ಲೀಷ್ ಎಂದರೆ ಕಬ್ಬಿಣದ ಕಡಲೆ. ಪ್ರಸ್ತುತ ಕಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇರುವದರಿಂದ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೆ ಇಂದು ಪ್ರತಿ ಮಗು ತನ್ನ ವಿದ್ಯಾಭ್ಯಾಸ ಮುಂದುವರೆಸಿಕೊಂಡು ಹೋದಂತೆ ಮುಂದೆ ಅನಿವಾರ್ಯವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಇಂಗ್ಲೀಷ್‍ನಲ್ಲಿಯೇ ಅಧ್ಯಯನ ಮಾಡಬೇಕಿದ್ದು, ಅಲ್ಲಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಎರಡನೇ ಭಾಷೆಯಾಗಿ ಇಂಗ್ಲೀಷ್ ಒಂದನ್ನು ಮಾತ್ರ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದರೂ, ವಿದ್ಯಾರ್ಥಿಗಳಿಗೆ ಅಷ್ಟಾಗಿ ಆಂಗ್ಲ ಭಾಷೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಈ ಭಾಷಾ ಮಾಧ್ಯಮವೇ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಬಹುಮುಖ್ಯ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೆಲವು ಕ್ರಿಯಾಶೀಲ ಶಿಕ್ಷಕರು ಸರಕಾರಿ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸಲೇಬೇಕೆಂಬ ಉದ್ದೇಶದಿಂದ ಇಂಗ್ಲೀಷ್ ಸ್ಪೋಕನ್ ತರಗತಿ ಆಯೋಜಿಸಿ ತರಬೇತಿ ನೀಡುತ್ತಿದ್ದಾರೆ. ಅಂತಹ ಶಾಲೆಗಳಲ್ಲಿ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ. ಇಲ್ಲಿರುವ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಒಬ್ಬರು.
ಈ ಶಾಲೆಯಲ್ಲಿ ಬೆಳಿಗ್ಗೆ 8 ರಿಂದ 9.30ರವರೆಗೆ ವಿದ್ಯಾರ್ಥಿಗಳಿಗೆ ಇಂಗ್ಲೀಷ್‍ಗಾಗಿ ವಿಶೇಷ ತರಗತಿ ನಡೆಸಿ ಅಭ್ಯಾಸ ಮಾಡಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಶಿಕ್ಷಕರೇ ಮಗು ಶಾಲೆ, ಮನೆ ಮತ್ತು ತನ್ನ ಸುತ್ತಲಿನ ಸನ್ನಿವೇಶಗಳಲ್ಲಿ ಬಳಸಬಹುದಾದ ಸುಮಾರು ಮುನ್ನೂರಕ್ಕೂ ಹೆಚ್ಚಿನ ಇಂಗ್ಲೀಷ್ ಭಾಷಾ ವಾಕ್ಯಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಪ್ರೇರೇಪಿಸಲು ಚಿತ್ರ ಸಹಿತ ಆಕರ್ಷಕ ಕಾರ್ಡುಗಳನ್ನು ರಚಿಸಿ ಕಲಿಕೆಗೆ ಬಳಸಿಕೊಳ್ಳುತ್ತಿದ್ದಾರೆ. 5ನೇ ತರಗತಿ ನಂತರ ಬಹುತೇಕ ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಹೋಗಬೇಕಾಗಿರುವದರಿಂದ ಅಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳಬೇಕೆಂಬ ಉದ್ದೇಶದಿಂದ ಗಣಿತ ಮತ್ತು ಪರಿಸರ ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನಾ ಅವಧಿ, ಮಧ್ಯಾಹ್ನ ಊಟದ ಸಮಯ ಹಾಗೂ ಸಂಜೆ ಮನೆಗೆ ತೆರಳುವ ಸಂದರ್ಭದಲ್ಲಿ ನಿಗದಿಪಡಿಸಿದ ವಿದ್ಯಾರ್ಥಿ ಇತರೆ ಹತ್ತು ವಿದ್ಯಾರ್ಥಿಗಳಿಗೆ 5 ವಾಕ್ಯಗಳು ಹಾಗೂ 10 ಇಂಗ್ಲೀಷ್ ಪದಗಳನ್ನು ಹೇಳಿಕೊಡುತ್ತಿದ್ದು, ಮಕ್ಕಳ ಶಬ್ಧ ಭಂಡಾರವೂ ಹೆಚ್ಚಾಗುತ್ತಿದೆ. ಪ್ರೋತ್ಸಾಹದ ದೃಷ್ಟಿಯಿಂದ ಎಲ್ಲಾ ವಿದ್ಯಾರ್ತಿಗಳ ಹೆಸರನ್ನು ಬರೆದು ನೋಟಿಸ್ ಬೋರ್ಡ್‍ನಲ್ಲಿ ತೂಗು ಹಾಕಿದ್ದು, ಶಾಲಾ ಪರಿಸರದಲ್ಲಿ ಇಂಗ್ಲೀಷ್‍ನಲ್ಲಿ ತಪ್ಪಿಲ್ಲದೆ ಮಾತನಾಡಿದ ವಿದ್ಯಾರ್ಥಿ ಹೆಸರಿನ ಮುಂದೆ 5 ಅಂಕಗಳನ್ನು ಹಾಕಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತಿದೆ ಎನ್ನುತ್ತಾರೆ ಶಿಕ್ಷಕ ಸತೀಶ್.
ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ ಅಭಿವೃದ್ಧಿಪಡಿಸಲು ಕರ್ಸಿವ್ ರೈಟಿಂಗ್ ಮಾದರಿಯನ್ನು ಹೇಳಿಕೊಡಲಾಗುತ್ತಿದೆ. ಮಗು ಯಾವದೇ ಭಾಷೆಯನ್ನು ಆಲಿಸುವಿಕೆಯಿಂದ ಕಲಿಯುತ್ತದೆ. ಭಾಷೆ ಕಲಿತ ಮೇಲೆ ವ್ಯಾಕರಣವನ್ನು ಅರ್ಥೈಸಿಕೊಳ್ಳುತ್ತದೆ ಎಂದು ಹೇಳುವ ಶಿಕ್ಷಕ ಸತೀಶ್ ತಮ್ಮದೇ ಶೈಲಿಯಲ್ಲಿ ಇಂಗ್ಲೀಷ್ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ಪೋಷಕರು ಸಹ ಉತ್ತಮ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಗಮನಾರ್ಹ ಪ್ರಗತಿ ತೋರುತ್ತಿದ್ದಾರೆ ಎಂದು ಸಂತೃಪ್ತಿ ವ್ಯಕ್ತಪಡಿಸುತ್ತಾರೆ.