ಸಿದ್ದಾಪುರ, ಜ. 6: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸಿ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಶಬರಿಮಲೆಯ ಶ್ರೀ ಅಯ್ಯಪ್ಪ ದೇವಾಲಯಕ್ಕೆ ಇತ್ತೀಚೆಗೆ ಮಹಿಳೆಯರಿಬ್ಬರು ಪ್ರವೇಶ ಮಾಡಿರುವ ಕ್ರಮವನ್ನು ಖಂಡಿಸಿ ನೆಲ್ಯಹುದಿಕೇರಿಯ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದಿಂದ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಮೆರವಣಿಗೆ ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಸಭೆ ಸೇರುವ ಮೂಲಕ ಸಮಾಪ್ತಿಗೊಂಡಿತು. ಪ್ರತಿಭಟನೆಯಲ್ಲಿ ಮಹಿಳೆಯರು ಹಾಗೂ ಅಯ್ಯಪ್ಪ ಮಾಲಾದಾರಿಗಳು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಕೇರಳ ಸರ್ಕಾರದ ವಿರುದ್ಧ ಕೇರಳದ ಮುಖ್ಯಮಂತ್ರಿಯ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿದರು.
ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿಂದೂ ಸಂಘಟನೆಯ ಮುಖಂಡರಾದ ಮೋಹನ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೆಲವು ಆಗಂತುಕರು ದೇಶದ್ರೋಹಿಗಳು ಕೊಡಗು ಜಿಲ್ಲೆಯಲ್ಲಿ ತಂಗುತ್ತಿದ್ದಾರೆ, ಈ ಬಗ್ಗೆ ಎಚ್ಚರವಹಿಸಬೇಕೆಂದು ಕರೆ ನೀಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್ ಮಾತನಾಡಿ ಮಹಿಳೆಯರಿಗೆ ಸಮಾನತೆಯನ್ನು ನೀಡಬೇಕೆಂದು ಒತ್ತಾಯಿಸಿ ಇತಿಹಾಸ ಪ್ರಸಿದ್ಧ ಶಬರಿಮಲೆ ಶ್ರೀಅಯ್ಯಪ್ಪ ದೇವಾಲಯಕ್ಕೆ ಈರ್ವರು ಮಹಿಳೆಯರು ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಮೀರಿ ದೇವಾಲಯ ಪ್ರವೇಶ ಮಾಡಿರುವದು ಖಂಡನೀಯವೆಂದರು. ಕೇರಳ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಯ ಪದಾಧಿಕಾರಿಗಳಾದ ಪ್ರವೀಣ್, ಸುರೇಶ್, ಪದ್ಮನಾಭ, ವಿಜೇಶ್ ಮತಿರರು ಭಾಗವಹಿಸಿದ್ದರು.
ಇದೇ ಸಂದರ್ಭ ಪ್ರತಿಭಟನಾಕಾರರು ಸಿಪಿಎಂ ಪಕ್ಷದ ಬಾವುಟ ಹಾಗೂ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಅವರ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.