ಕುಶಾಲನಗರ, ಜ. 4: ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ವಚ್ಛತೆ ಬಗ್ಗೆ ದೃಢ ಸಂಕಲ್ಪ ಬಂದಲ್ಲಿ ಮಾತ್ರ ಸ್ವಚ್ಛ, ಸುಂದರ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್, ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಯುಕ್ತ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾ ಕೇಂದ್ರ ಮತ್ತು ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ, ಅವೈಜ್ಞಾನಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಹೆಸರಿನಲ್ಲಿ ಕಾವೇರಿ ನದಿ ಮತ್ತು ಪರಿಸರ ಕಲುಷಿತಗೊಳ್ಳುತ್ತಿದೆ. ವಿದೇಶಗಳಲ್ಲಿ ಮಹಾನಗರ ನಡುವೆ ಹರಿದು ಸಾಗುವ ನದಿ ಅತ್ಯಂತ ಸ್ವಚ್ಛತೆಯಿಂದ ಕೂಡಿರುತ್ತದೆ. ಆದರೆ ನದಿ ಬಗ್ಗೆ ಪೂಜ್ಯ ಭಾವನೆ ಹೊಂದಿರುವ ಭಾರತದಲ್ಲಿ ಜಲಮೂಲಗಳು ಕಲುಷಿತಗೊಳ್ಳುತ್ತಿರುವದು ಅತ್ಯಂತ ವಿಷಾದಕರ ಸಂಗತಿ ಎಂದರು.

ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಮೀರಿ ಪ್ರೀತಿ, ವಿಶ್ವಾಸ, ಸಹಬಾಳ್ವೆ ಒಡಮೂಡಬೇಕಿದೆ. ದೇವಾಲಯ, ಮಸೀದಿ, ಚರ್ಚ್‍ಗಳ ಮಾನಸಿಕ ಶಾಂತಿ ನೆಮ್ಮದಿ ಪಡೆಯುವ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವದು ಮುಖ್ಯ ಎಂದು ತಿಳಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿ, ಕಾರ್ಯಕ್ರಮದ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಮಾತನಾಡಿದರು.

ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಖಜಾಂಚಿ ಮಣಿ, ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಡಿ. ಪುಂಡರೀಕಾಕ್ಷ, ಪ.ಪಂ. ಸದಸ್ಯರಾದ ಅಮೃತ್‍ರಾಜ್, ಜಯಲಕ್ಷ್ಮಿ, ಪ್ರಮುಖರಾದ ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ಬಿ.ಜೆ. ಅಣ್ಣಯ್ಯ, ಸೇವಾ ಪ್ರತಿನಿಧಿಗಳಾದ ಯಶೋಧ, ಜಯಲಕ್ಷ್ಮಿ, ವಿಜಯಲಕ್ಷ್ಮಿ, ಡಾಟಿ ಮತ್ತಿತರರು ಇದ್ದರು.

ಯೋಜನೆಯ ಮೇಲ್ವಿಚಾರಕ ಹರೀಶ್ ಸ್ವಾಗತಿಸಿದರು, ಸೇವಾ ಪ್ರತಿನಿಧಿ ವಾರಿಜಾ ನಿರೂಪಿಸಿ, ವಂದಿಸಿದರು.